ಕೋಲ್ಕತಾ:ಇಲ್ಲಿನ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತರಬೇತಿನಿರತ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಿರಿಯ ವೈದ್ಯರು ಆರಂಭಿಸಿರುವ ಪ್ರತಿಭಟನೆಗೆ ಹಿರಿಯ ವೈದ್ಯರು ಕೂಡಾ ಕೈ ಜೋಡಿಸಿದ್ದು, ಇಂದು 100 ಮಂದಿ ಹಿರಿಯ ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದರು.
ಕೋಲ್ಕತಾದ ಮೆಡಿಕಲ್ ಕಾಲೇಜಿನ 70ಕ್ಕೂ ಹಿರಿಯ ಸಿಬ್ಬಂದಿ, ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯಲ್ಲಿರುವ ಉತ್ತರ ಬೆಂಗಾಲ್ ಕಾಲೇಜು ಮತ್ತು ಆಸ್ಪತ್ರೆಯ 40 ವೈದ್ಯರು ರಾಜೀನಾಮೆ ಸಲ್ಲಿಸಿದ್ದಾರೆ.
ಮಾಹಿತಿ ಪ್ರಕಾರ, ಪಶ್ಚಿಮ ಮಿಡ್ನಾಪೊರ್ ಜಿಲ್ಲೆಯ ಮಿಡ್ನಾಪೊರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರೂ ಕೂಡ ಸಾಮೂಹಿಕ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಮಂಗಳವಾರ ಮಧ್ಯಾಹ್ನ ಆರ್.ಜಿ.ಕರ್ ಆಸ್ಪತ್ರೆಯ 50ಕ್ಕೂ ಹೆಚ್ಚು ಹಿರಿಯ ವೈದ್ಯರು ರಾಜೀನಾಮೆ ನೀಡಿದ್ದರು.
ಆಮರಣಾಂತ ಉಪವಾಸಕ್ಕೆ ಮುಂದಾಗಿರುವ ಕಿರಿಯ ವೈದ್ಯರ ಪ್ರಾಣಕ್ಕೆ ತೊಂದರೆಯಾದರೆ ಯಾರು ಜವಾಬ್ದಾರಿ ಹೊರುತ್ತಾರೆ?. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಗಂಭೀರವಾಗುವ ಮೊದಲೇ ರಾಜ್ಯ ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗುವಂತೆ ಮನವಿ ಮಾಡುತ್ತೇವೆ ಎಂದು ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಸೇವೆಗೆ ಅಡ್ಡಿಯಿಲ್ಲ:ಕಿರಿಯ ವೈದ್ಯರ ಪ್ರತಿಭಟನೆಗೆ ಬೆಂಬಲವಾಗಿ ಹಿರಿಯ ವೈದ್ಯರು ನೀಡುತ್ತಿರುವ ಸಾಮೂಹಿಕ ರಾಜೀನಾಮೆಯಿಂದಾಗಿ ವೈದ್ಯಕೀಯ ಕಾಲೇಜುಗಳಲ್ಲಿನ ಆರೋಗ್ಯ ಸೇವೆಗೆ ಯಾವುದೇ ಹಾನಿಯಾಗಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ದುರ್ಗಾಪೂಜೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಒಳ ಮತ್ತು ಹೊರ ರೋಗಿಗಳ ಪ್ರಮಾಣ ಕಡಿಮೆ ಇದೆ. ಆದಾಗ್ಯೂ, ನಿಯಮಿತ ಕರ್ತವ್ಯ ನಿರ್ವಹಣೆಗೆ ರಾಜ್ಯದಲ್ಲಿ ಹಿರಿಯ ಮತ್ತು ಕಿರಿಯ ವೈದ್ಯರು, ಆರ್ಎಂಒ ಹಾಗೂ ಸಹಾಯಕ ಪ್ರೊಫೆಸರ್ಗಳು ಆಸ್ಪತ್ರೆಗಳಲ್ಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಮೂಹಿಕ ರಾಜೀನಾಮೆ ನೀಡಿರುವ ವೈದ್ಯರ ಜೊತೆಗೆ ಇನ್ನೂ ನಾವು ಅಧಿಕೃತ ಮಾತುಕತೆ ನಡೆಸಿಲ್ಲ. ಆಸ್ಪತ್ರೆಗಳಿಗೆ ಯಾವುದೇ ವೈದ್ಯರು ಗೈರಾಗಿಲ್ಲ. ಹೀಗಾಗಿ, ಸೇವೆಯಲ್ಲಿ ಯಾವುದೇ ಅಡ್ಡಿಯಾಗಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಭಾರತದಲ್ಲೂ ತಲೆ ಎತ್ತಿದೆ ಬುರ್ಜ್ ಖಲೀಫಾ: ಈ ಮಂಟಪದ ಬಾಗಿಲು ತೆರೆಯುವುದು ಯಾವಾಗ ಗೊತ್ತೇ?