ಕರ್ನಾಟಕ

karnataka

ETV Bharat / bharat

ನಕಲಿ LLB ಡಿಗ್ರಿ ಆರೋಪ: ಬಾರ್ ಕೌನ್ಸಿಲ್ ಉಪಾಧ್ಯಕ್ಷ ನಾಸಿಯಾರ್ ವಜಾ, ಸಿಬಿಐ ತನಿಖೆ - BAR COUNCIL OF INDIA

ದಿಲ್ಲಿಯ ಬಾರ್ ಕೌನ್ಸಿಲ್ ಉಪಾಧ್ಯಕ್ಷ ಸ್ಥಾನದಿಂದ ವಕೀಲ ಸಂಜೀವ್ ನಾಸಿಯಾರ್ ಅವರನ್ನು ವಜಾಗೊಳಿಸಲಾಗಿದೆ.

ಆಮ್ ಆದ್ಮಿ ಪಕ್ಷದ (ಎಎಪಿ) ಕಾನೂನು ಘಟಕದ ಮುಖ್ಯಸ್ಥ ನಾಸಿಯಾರ್
ಆಮ್ ಆದ್ಮಿ ಪಕ್ಷದ (ಎಎಪಿ) ಕಾನೂನು ಘಟಕದ ಮುಖ್ಯಸ್ಥ ನಾಸಿಯಾರ್ (IANS)

By ANI

Published : Dec 8, 2024, 4:31 PM IST

ನವದೆಹಲಿ: ದಿಲ್ಲಿಯ ಬಾರ್ ಕೌನ್ಸಿಲ್ ಉಪಾಧ್ಯಕ್ಷ ಸ್ಥಾನದಿಂದ ವಕೀಲ ಸಂಜೀವ್ ನಾಸಿಯಾರ್ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ರವಿವಾರ ನಿರ್ದೇಶಿಸಿದೆ.

ಎಎಪಿ ಕಾನೂನು ಘಟಕದ ಮುಖ್ಯಸ್ಥ: ನಾಸಿಯಾರ್ ಅವರ ಎಲ್‌ಎಲ್‌ಬಿ (ಆನರ್ಸ್) ಪದವಿಯ ಸತ್ಯಾಸತ್ಯತೆ ಮತ್ತು ಸಂಬಂಧಿತ ದಾಖಲೆಗಳ ಸಂಭಾವ್ಯ ತಿರುಚುವಿಕೆಯ ಬಗ್ಗೆ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಮನವಿ ಮಾಡುವಂತೆ ಬಾರ್ ಕೌನ್ಸಿಲ್ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ಕಾನೂನು ಘಟಕದ ಮುಖ್ಯಸ್ಥರೂ ಆಗಿರುವ ನಾಸಿಯಾರ್ ವಿರುದ್ಧ ಈಗ ಪದವಿ ಪ್ರಮಾಣ ಪತ್ರ ವಂಚನೆಯ ಕುರಿತಾಗಿ ತನಿಖೆ ನಡೆಯಲಿದೆ.

ಇಂದೋರ್‌ನ ದೇವಿ ಅಹಲ್ಯಾಬಾಯಿ ವಿಶ್ವವಿದ್ಯಾಲಯದಿಂದ ದೆಹಲಿ ಬಾರ್ ಕೌನ್ಸಿಲ್ ಉಪಾಧ್ಯಕ್ಷ ಸಂಜೀವ್ ನಾಸಿಯಾರ್ ಅವರಿಗೆ ನೀಡಲಾದ ಎಲ್ಎಲ್​​ಬಿ (ಆನರ್ಸ್) ಪದವಿ ಪ್ರಮಾಣ ಪತ್ರ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ತಕ್ಷಣ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಡಿಸೆಂಬರ್ 7, 2024ರಂದು ನಡೆದ ಸಭೆಯಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿರ್ಧರಿಸಿದೆ. ಸೆಪ್ಟೆಂಬರ್ 3, 2024ರ ನಿರ್ಣಯದ ಪ್ರಕಾರ ಮತ್ತು ದೆಹಲಿ ಹೈಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾದ ಉಪ ಸಮಿತಿಯು ನಡೆಸಿದ ತನಿಖೆಯನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಂಜೀವ್ ನಾಸಿಯಾರ್ ಅವರ ಪದವಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಗಮನಾರ್ಹ ಮತ್ತು ಸ್ಪಷ್ಟವಾದ ವ್ಯತ್ಯಾಸಗಳು ತನಿಖೆಯಲ್ಲಿ ಕಂಡು ಬಂದಿವೆ ಎಂದು ಬಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ದಾಖಲೆಗಳಲ್ಲಿ ತಿಳಿಸಲಾದ ದಿನಾಂಕದ ಅವಧಿಯಲ್ಲಿ ಇಂದೋರ್‌ನ ಪಿ.ಎಂ.ಬಿ. ಗುಜರಾತಿ ಕಲಾ ಮತ್ತು ಕಾನೂನು ಕಾಲೇಜಿಗೆ ಎಲ್‌ಎಲ್‌ಬಿ (ಆನರ್ಸ್) ಪದವಿ ತರಗತಿ ನಡೆಸಲು ಅನುಮತಿಯೇ ಇರಲಿಲ್ಲ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಉಪಸಮಿತಿಗೆ ಒದಗಿಸಲಾದ ಶೈಕ್ಷಣಿಕ ದಾಖಲೆಗಳಲ್ಲಿ ದಿನಾಂಕಗಳನ್ನು ಏಕರೂಪದ ಕೈಬರಹ ಮತ್ತು ಶಾಯಿಯೊಂದಿಗೆ ತಿದ್ದಿ ದಿನಾಂಕದ ಅವಧಿಯನ್ನು ಹೆಚ್ಚಿಸಲಾಗಿದೆ. ತನಿಖೆಯಲ್ಲಿ ಬಯಲಾದ ಮತ್ತೊಂದು ಸಂಗತಿ ಏನೆಂದರೆ, ಎಲ್ಎಲ್​ಬಿ (ಆನರ್ಸ್) ತರಗತಿಗಳಿಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ ಅಡಿಯಲ್ಲಿ 2008 ರಲ್ಲಿ ಅನುಮತಿ ನೀಡಲಾಗಿತ್ತು. ಆದರೆ 1988 ರಲ್ಲಿಯೇ ಇಂಥ ಪದವಿ ಪ್ರಮಾಣ ಪತ್ರ ನೀಡಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ವಿಚಾರಣೆಯ ಸಮಯದಲ್ಲಿ ತನಿಖೆಗೆ ವಿಶ್ವವಿದ್ಯಾಲಯದ ಅಧಿಕಾರಿಗಳು ಸಹಕಾರ ನೀಡದಿರುವುದು ಮತ್ತು ತನಿಖೆಗೆ ಅಡ್ಡಿಪಡಿಸುವಂತೆ ವರ್ತಿಸಿರುವುದು ಪದವಿಯ ಅಸಲಿತನದ ಬಗ್ಗೆ ಗಂಭೀರ ಅನುಮಾನಗಳನ್ನು ಮೂಡಿಸಿದೆ. ಸಮಗ್ರ ವಿಚಾರಣೆಯ ನಂತರ ಸಂಜೀವ್ ನಾಸಿಯಾರ್ ಅವರ ಪದವಿಯು ಪ್ರಶ್ನಾರ್ಹವಾಗಿದೆ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ರಚಿಸಿದ ಉಪಸಮಿತಿ ಅಭಿಪ್ರಾಯ ಪಟ್ಟಿದೆ.

ವಕೀಲರ ಕಾಯ್ದೆ, 1961 ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ ಅಡಿಯಲ್ಲಿ ತನ್ನ ಶಾಸನಬದ್ಧ ಅಧಿಕಾರವನ್ನು ಚಲಾಯಿಸಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಸಾಮಾನ್ಯ ಮಂಡಳಿ ಈ ಕೆಳಗಿನಂತೆ ನಿರ್ಣಯ ಕೈಗೊಂಡಿದೆ:

"ಸಂಜೀವ್ ನಾಸಿಯಾರ್ ಅವರ ಎಲ್ಎಲ್​ಬಿ (ಆನರ್ಸ್) ಪದವಿಯ ತನಿಖೆಗೆ ಸಂಬಂಧಿಸಿದಂತೆ ಉಪ ಸಮಿತಿಯ ದಿನಾಂಕ 25.10.2024ರ ವರದಿಯನ್ನು ಪಡೆದುಕೊಳ್ಳಲಾಗಿದೆ. ಅದರಂತೆ ಎಲ್‌ಎಲ್‌ಬಿ (ಆನರ್ಸ್)ನ ಸತ್ಯಾಸತ್ಯತೆಯ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ಸಿಬಿಐಗೆ ಮನವಿ ಸಲ್ಲಿಸುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಕಾರ್ಯದರ್ಶಿಗೆ ನಿರ್ದೇಶಿಸಲಾಗಿದೆ. ಸಂಜೀವ್ ನಾಸಿಯಾರ್ ಅವರ ಪದವಿ ಮತ್ತು ಸಂಬಂಧಿತ ದಾಖಲೆಗಳ ಸಂಭಾವ್ಯ ತಿರುಚುವಿಕೆಯ ಬಗ್ಗೆ ತನಿಖೆ ನಡೆಸಲು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುವುದಕ್ಕಾಗಿ ಸಿಬಿಐಗೆ ಕೋರಲು ನಿರ್ದೇಶಿಸಲಾಗಿದೆ."

ತನಿಖೆಯ ಫಲಿತಾಂಶ ಬರುವವರೆಗೆ ಸಂಜೀವ್ ನಾಸಿಯಾರ್ ಅವರನ್ನು ದೆಹಲಿ ಬಾರ್ ಕೌನ್ಸಿಲ್ ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಬಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಹಿಂದುಗಳ ಮೇಲಿನ ದಾಳಿಗೆ ಪ್ರತೀಕಾರ: ಬಾಂಗ್ಲನ್ನರಿಗೆ ಹೋಟೆಲ್​ ಸೇವೆ ನಿರಾಕರಿಸಿದ ತ್ರಿಪುರ

ABOUT THE AUTHOR

...view details