ಪುಲ್ವಾಮಾ(ಜಮ್ಮು ಮತ್ತು ಕಾಶ್ಮೀರ): ಭಾಗಶಃ ರಸಗೊಬ್ಬರ ಮತ್ತು ಕೀಟನಾಶಕ ಔಷಧಿಗಳನ್ನೇ ನಂಬಿಕೊಂಡಿರುವ ಕೋಟ್ಯಂತರ ರೈತರ ನಡುವೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಬಂಗುಂಡ್ ಎಂಬ ಕುಗ್ರಾಮ ಸಾವಯವ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದೆ. ಈಗಾಗಲೇ ಕಣಿವೆಯಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆದ ಈ ಗ್ರಾಮವು ಕಾಶ್ಮೀರದ ಮೊದಲ 'ಸಾವಯವ ಗ್ರಾಮ'ವಾಗಿ ಗಮನ ಸೆಳೆದಿತ್ತು. ಇದೀಗ ಸಾವಯವ ಕೃಷಿ ಪದ್ಧತಿಯನ್ನು ಮತ್ತಷ್ಟು ವಿಸ್ತರಿಸಿಕೊಂಡು ತಾನು ಬೆಳೆದ ಬೆಳೆಗಳನ್ನು ಕೇವಲ ಕಣಿವೆ ನಾಡಿಗೆ ಮಾತ್ರವಲ್ಲದೇ, ಹೊರರಾಜ್ಯಗಳಿಗೂ ಸರಬರಾಜು ಮಾಡುವ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ.
ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಪುಲ್ವಾಮಾ ಜಿಲ್ಲೆ ಇದೀಗ ಹಣ್ಣು ಮತ್ತು ತರಕಾರಿಗಳ ಕೃಷಿಯಲ್ಲಿಯೂ ಒಂದು ಹೊಸ ಹೆಜ್ಜೆ ಇಟ್ಟಿದೆ. ಸಾಂಪ್ರದಾಯಿಕ ಕೃಷಿಯತ್ತ ಮುಖ ಮಾಡಿರುವ ಬಂಗುಂಡ್ ಗ್ರಾಮದಲ್ಲಿ ಯಾವುದೇ ರಸಗೊಬ್ಬರ ಮತ್ತು ಇತರ ರಾಸಾಯನಿಕಗಳ ಔಷಧಿ ಬಳಸದೇ ಹತ್ತು ಹಲವು ರೀತಿಯ ತರಕಾರಿಗಳನ್ನು ಬೆಳೆಯಲಾಗುತ್ತದೆ. ಸಮೃದ್ಧವಾಗಿ ಬೆಳೆದ ತರಕಾರಿಗಳನ್ನು ಕಣಿವೆ ಅಷ್ಟೇ ಅಲ್ಲದೇ ಕಣಿವೆಯ ಹೊರಗೂ ಮಾರಾಟ ಮಾಡಲಾಗುತ್ತದೆ. ಸಾವಯವ ಹಾಗೂ ಸಮಗ್ರ ಕೃಷಿಯಿಂದ ಆದಾಯವಷ್ಟೇ ಅಲ್ಲ ಆರೋಗ್ಯಕರ ಬದುಕೂ ಸಿಗಲಿದೆ ಎಂಬುದಕ್ಕೆ ಗ್ರಾಮ ಉತ್ತಮ ಉದಾಹರಣೆ.
"ಕಾಶ್ಮೀರದ ಮೊದಲ 'ಸಾವಯವ ಗ್ರಾಮ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಂಗುಂಡ್ ಗ್ರಾಮ ಸುಮಾರು 72 ಕುಟುಂಬಗಳನ್ನು ಹೊಂದಿದ್ದು 400 ಕನಲ್ ಭೂಮಿಯಲ್ಲಿ ತರಕಾರಿ ಬೆಳೆಯುತ್ತಿದೆ. 2018ರಿಂದ ಗ್ರಾಮದಲ್ಲಿ ಸಾವಯವ ಕೃಷಿಯಾಧಾರಿತ ಪದ್ಧತಿ ಅನುಸರಿಸಲಾಗುತ್ತಿದೆ. ತರಹೇವಾರು ತರಕಾರಿ ಬೆಳೆದು ಸಂತೃಪ್ತಿ ಜೀವನ ನಡೆಸಲಾಗುತ್ತದೆ" ಎನ್ನುತ್ತಾರೆ ಸ್ಥಳೀಯ ರೈತ ಬಶೀರ್ ಅಹಮದ್.