ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಡಿಸೆಂಬರ್ 16 ರಂದು ವಿಜಯ್ ದಿವಸ್ ಸಂದರ್ಭದಲ್ಲಿ ಮಾಡಿದ ಪೋಸ್ಟ್ಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಕಾನೂನು ಸಲಹೆಗಾರ ಆಸಿಫ್ ನಜ್ರುಲ್ ಟೀಕಿಸಿದ್ದಾರೆ.
"ಮೋದಿ ಪೋಸ್ಟ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇನೆ. ಆ ಗೆಲುವಿನಲ್ಲಿ ಭಾರತ ಮಿತ್ರ ರಾಷ್ಟ್ರವೇ ಹೊರತು ಬೇರೇನೂ ಅಲ್ಲ" ಎಂದು ನಜ್ರುಲ್ ಹೇಳಿದ್ದಾರೆ. ನಜ್ರುಲ್ ಪೋಸ್ಟ್ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಮರು ಪೋಸ್ಟ್ ಮಾಡಿದ್ದಾರೆ.
ಇನ್ನೊಂದೆಡೆ ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನದ ಸಂಚಾಲಕ ಹಸ್ನತ್ ಅಬ್ದುಲ್ಲಾ ಕೂಡ ಮೋದಿ ಅವರ ಪೋಸ್ಟ್ ಅನ್ನು ವಿರೋಧಿಸಿದ್ದಾರೆ. 'ಭಾರತವು ಈ ಸ್ವಾತಂತ್ರ್ಯವನ್ನು ತನ್ನ ವಿಜಯವೆಂದು ಹೇಳಿಕೊಳ್ಳುವುದು ಬಾಂಗ್ಲಾದೇಶದ ಸ್ವಾತಂತ್ರ್ಯ, ಸಾರ್ವಭೌಮತ್ವ ಮತ್ತು ಏಕತೆಗೆ ಬೆದರಿಕೆಯಾಗಿದೆ ಎಂದು ನಾನು ಭಾವಿಸುತ್ತೇನೆ'. ಭಾರತದಿಂದ ಬರುತ್ತಿರುವ ಈ ಬೆದರಿಕೆಯ ವಿರುದ್ಧ ನಾವು ಹೋರಾಡಬೇಕಾಗಿದೆ. ನಾವು ಈ ಹೋರಾಟವನ್ನು ಮುಂದುವರಿಸಬೇಕು' ಎಂದು ಹಸ್ನತ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಅಷ್ಟಕ್ಕೂ ಮೋದಿ ಪೋಸ್ಟ್ನಲ್ಲಿ ಏನಿತ್ತು?: "ಇಂದು ವಿಜಯ್ ದಿವಸ್. 1971ರ ಯುದ್ಧದಲ್ಲಿ ಭಾರತದ ಐತಿಹಾಸಿಕ ವಿಜಯಕ್ಕೆ ಕಾರಣರಾದ ವೀರ ಸೈನಿಕರ ತ್ಯಾಗವನ್ನು ನಾವು ಗೌರವಿಸುತ್ತೇವೆ. ಅವರ ನಿಸ್ವಾರ್ಥ ಸಮರ್ಪಣೆ ಮತ್ತು ಅಚಲ ಸಂಕಲ್ಪ ನಮ್ಮ ದೇಶವನ್ನು ಉಳಿಸಿದೆ. ಅವರು ನಮಗೆ ಕೀರ್ತಿ ತಂದರು. ಇಂದು - ಅವರ ಅಸಾಧಾರಣ ಶೌರ್ಯ ಮತ್ತು ಅಚಲ ಮನೋಭಾವಕ್ಕೆ ಗೌರವ ಅರ್ಪಿಸುತ್ತಾ, ಅವರ ತ್ಯಾಗಗಳು ಮುಂದಿನ ಪೀಳಿಗೆಗೆ ಸದಾ ಸ್ಫೂರ್ತಿ ನೀಡುತ್ತವೆ. ಅವರು ನಮ್ಮ ದೇಶದ ಇತಿಹಾಸದಲ್ಲಿ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತಾರೆ" ಎಂದು ಪ್ರಧಾನಿ ಮೋದಿ ವಿಜಯ್ ದಿವಸ್ ಸಂದರ್ಭದಲ್ಲಿ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದರು.
ವಿಜಯ್ ದಿವಸ್ದಂದು ಯೂನಸ್ ಭಾಷಣ - ಭಾರತದ ಪ್ರಸ್ತಾಪವಿಲ್ಲ!:ವಿಜಯ್ ದಿವಸ್ ಸಂದರ್ಭ ಡಿಸೆಂಬರ್ 16 ರಂದು ಬಾಂಗ್ಲಾದಲ್ಲಿ ದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಮತ್ತು ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ರಾಜಧಾನಿ ಢಾಕಾದಲ್ಲಿರುವ ರಾಷ್ಟ್ರೀಯ ಸ್ಮಾರಕದಲ್ಲಿ ಪ್ರತ್ಯೇಕವಾಗಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಬಳಿಕ ಯೂನಸ್ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ್ದು ಅದು ಟಿವಿಯಲ್ಲಿ ಪ್ರಸಾರವಾಯಿತು. ಭಾಷಣದಲ್ಲಿ ದೇಶದ ಉದ್ಧಾರಕ್ಕಾಗಿ ಯುವಕರು ಸೇರಿದಂತೆ ಅನೇಕರು ಬಲಿದಾನ ಮಾಡಿದ್ದಾರೆ ಎಂದ ಅವರು ಬಾಂಗ್ಲಾದೇಶದ ಸಂಸ್ಥಾಪಕ ಬಂಗಬಂಧು ಮುಜಿಬುರ್ ರೆಹಮಾನ್ ಅವರ ಹೆಸರನ್ನೇ ಉಲ್ಲೇಖಿಸಲಿಲ್ಲ. ಪಾಕಿಸ್ತಾನದಿಂದ ಬಾಂಗ್ಲಾದೇಶದ ವಿಮೋಚನೆಗೆ ಪ್ರಮುಖ ಕಾರಣವಾದ ಭಾರತದ ಹೆಸರನ್ನು ಯೂನಸ್ ಹೇಳಲಿಲ್ಲ. ಇದಲ್ಲದೇ, ಪಾಕಿಸ್ತಾನ ವಿರೋಧಿ ಹೋರಾಟದಲ್ಲಿ ಬಂಗಾಳಿಗಳಿಗೆ ಭಾರತ ನೀಡಿದ ಸಹಾಯವನ್ನು ಯೂನಸ್ ಉಲ್ಲೇಖಿಸಲಿಲ್ಲ.
ನಿಮಗೆ ತಿಳಿದಿರುವ ಹಾಗೇ ಪಾಕಿಸ್ತಾನದ ಸಂಕೋಲೆಯನ್ನು ಮುರಿದು ಆ ದೇಶದಿಂದ ಬಾಂಗ್ಲಾದೇಶವನ್ನು ವಿಮೋಚನೆಗೊಳಿಸುವಲ್ಲಿ ಭಾರತೀಯ ಸೇನೆ ಪ್ರಮುಖ ಪಾತ್ರ ವಹಿಸಿದೆ. 1971 ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಪ್ರಾರಂಭವಾದ ಸ್ವಾತಂತ್ರ್ಯ ಹೋರಾಟವು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧಕ್ಕೆ ಕಾರಣವಾಯಿತು. ಭಾರತೀಯ ಸೇನೆ ಪಾಕಿಸ್ತಾನವನ್ನು ಸೋಲಿಸಿತು. 90,000 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಭಾರತೀಯ ಸೇನೆಯ ಮುಂದೆ ಶರಣಾದರು. ಅದು ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾಯಿತು.
ಇದನ್ನೂ ಓದಿ:ಆಫ್ರಿಕನ್ ಪತ್ರಕರ್ತರನ್ನು ಭೇಟಿ ಮಾಡಿದ ಜೈ ಶಂಕರ್: ಭಾರತದ ರೂಪಾಂತರಗಳ ಬಗ್ಗೆ ಸಂವಾದ