ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ, ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಅವಹೇನಕಾರಿ ಹೇಳಿಕೆ ಖಂಡಿಸಿ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಇದೇ ವೇಳೆ ಮಾತಿನ ಭರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಸದಸ್ಯ ಸಿ.ಟಿ. ರವಿ ಅವರು ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತು.
ಗದ್ದಲ ತೀವ್ರವಾಗುತ್ತಿದ್ದಂತೆ ಸದನವನ್ನು ಸಭಾಪತಿ ಕೆಲಕಾಲ ಮುಂದೂಡಿದರು. ಬಳಿಕ ಆಡಳಿತ ಸದಸ್ಯರು ದೂರು ನೀಡಲು ಸಭಾಪತಿ ಕೊಠಡಿಗೆ ತೆರಳಿದರು.
ಪ್ರಶ್ನೋತ್ತರ ಅವಧಿ ಮುಗಿದ ಮೇಲೆ ಶೂನ್ಯ ಅವಧಿಯಲ್ಲಿ ಅಮಿತ್ ಶಾ ಹೇಳಿಕೆ ಖಂಡಿಸಿ ಆಡಳಿತ ಸದಸ್ಯರು ಧರಣಿಗೆ ಮುಂದಾದರು. ಕೂಡಲೇ ಅಮಿತ್ ಶಾ ಅವರನ್ನು ಬಂಧಿಸಿ, ರಾಜೀನಾಮೆ ಪಡೆಯುವಂತೆ ಕೈ ಸದಸ್ಯರು ಆಗ್ರಹಿಸಿದರು.
ಇದೇ ವೇಳೆ, ಬಿಜೆಪಿ ಸದಸ್ಯರು ಕೂಡ ಅಂಬೇಡ್ಕರ್ ಭಾವಚಿತ್ರ ಹಿಡಿದು ಅವರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರಿಗೆ ಭಾರತ ರತ್ನವನ್ನೂ ಅವರು ನೀಡಲಿಲ್ಲ ಎಂದು ಹರಿಹಾಯ್ದರು.
ಎರಡೂ ಕಡೆಯವರ ನಡುವೆ ವಾಗ್ವಾದ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು.
ಈ ವೇಳೆ ಪರಿಷತ್ ಸದಸ್ಯ ಸಿ.ಟಿ. ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಭಾಪತಿ ಬಸವರಾಜ ಹೊರಟ್ಟಿ ಅವರ ಕೊಠಡಿಗೆ ತೆರಳಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಎಲ್ಲ ಕೈ ಸದಸ್ಯರು ದೂರು ನೀಡಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆ: ವಿಧಾನಸಭೆಯಲ್ಲೂ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ