ಕೊಯಮತ್ತೂರು (ತಮಿಳುನಾಡು): 15 ದಿನದ ಮಗುವನ್ನು ಮಾರಾಟ ಮಾಡಿದ ಕೇಸ್ಗೆ ಸಂಬಂಧಿಸಿದಂತೆ ಬಿಹಾರದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜೈಲಿಗೆ ಹಾಕಿರುವ ಘಟನೆ ಕೊಯಮತ್ತೂರಿನಲ್ಲಿ ವರದಿಯಾಗಿದೆ.
ಬಿಹಾರ ಮೂಲದ ಮಹೇಶ್ ಕುಮಾರ್ ಮತ್ತು ಅಂಜಲಿ ಕೊಯಮತ್ತೂರು ಜಿಲ್ಲೆಯ ಸೂಲೂರು ಪಕ್ಕದಲ್ಲಿರುವ ಅಪ್ಪನಾಯಕನಪಟ್ಟಿ ಪ್ರದೇಶದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಬಿಹಾರದಿಂದ ಅವರ ಸಂಬಂಧಿಕರು ತಂದಿದ್ದ ಮಗುವನ್ನು ತಿಮ್ಮನಾಯಕನ್ ಪಾಳ್ಯಂ ಪ್ರದೇಶದ ವಿಜಯನ್ ಎಂಬ ರೈತನಿಗೆ ಮಾರಾಟ ಮಾಡಿದ್ದಾರೆ ಎಂದು ಚೈಲ್ಡ್ ಲೈನ್ ಸಂಸ್ಥೆಗೆ ದೂರು ಬಂದಿತ್ತು.
ಈ ಸಂಬಂಧ ಚೈಲ್ಡ್ ಲೈನ್ ಸಂಸ್ಥೆಯವರು ಕರುಮಠಂಬಟ್ಟಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಮಕ್ಕಳ ಮಾರಾಟ ನಡೆಯುತ್ತಿರುವುದು ದೃಢಪಟ್ಟಿದೆ. ಇದಾದ ಬಳಿಕ ಹೋಟೆಲ್ ನಡೆಸುತ್ತಿದ್ದ ಬಿಹಾರ ಮೂಲದ ಮಹೇಶ್ ಕುಮಾರ್ - ಅಂಜಲಿ ಅವರನ್ನು ಜೂ. 3ರಂದು ಬಂಧಿಸಿ ತನಿಖೆ ನಡೆಸಲಾಗಿತ್ತು.
ರೈತ ವಿಜಯನ್‌ಗೆ ಕಳೆದ 17 ವರ್ಷಗಳಿಂದ ಮಗುವಾಗಿಲ್ಲ. ತನ್ನ ಸಮಸ್ಯೆಯನ್ನು ಅನೇಕರಿಗೆ ತಿಳಿಸಿದ್ದಾನೆ. ಅವರ ಪರಿಚಯಸ್ಥರಾದ ಅಂಜಲಿ ಮತ್ತು ಮಹೇಶ್ ಕುಮಾರ್ ಅವರು ತಮ್ಮ ಸಂಬಂಧಿಕರ 15 ದಿನದ ಹೆಣ್ಣು ಮಗುವಿದೆ ಮತ್ತು ಮಹಿಳೆಯು ಬಿಹಾರದಲ್ಲಿದ್ದಾಳೆ. ಅವರ ಮಗುವನ್ನು ಕೊಡುವುದಾಗಿ ತಿಳಿಸಿದರು. ಇದಕ್ಕೆ ರೈತ ವಿಜಯನ್ ಎರಡೂವರೆ ಲಕ್ಷ ರೂಪಾಯಿ ಕೊಡುತ್ತಾರೆ. ಅವರಿಗೆ ಮಗು ನೀಡುವಂತೆ ಅಂಜಲಿಯು, ಬಿಹಾರದಲ್ಲಿರುವ ತನ್ನ ತಾಯಿ ಪೂನಂ ದೇವಿಗೆ ತಿಳಿಸಿದ್ದಾಳೆ. ಮಗುವಿನ ಪೋಷಕರು ಪೂನಂ ದೇವಿಯ ಮಾತಿಗೆ ಒಪ್ಪಿದ್ದಾರೆ.
ಬಿಹಾರ ಮೂಲದ ಪೂನಂ ದೇವಿ ಹಾಗೂ ಅವರ ಕಿರಿಯ ಮಗಳು ಮೇಘಕುಮಾರಿ ಅವರು ಬಿಹಾರದಿಂದ 15 ದಿನದ ಹೆಣ್ಣು ಮಗುವನ್ನು ಸೂಲೂರಿಗೆ ಕರೆತಂದು ಅಂಜಲಿ ಮತ್ತು ಮಹೇಶ್ ಕುಮಾರ್ ದಂಪತಿಗೆ ನೀಡಿ ಹಣ ಪಡೆದಿದ್ದಾರೆ. ಎರಡೂವರೆ ಲಕ್ಷ ರೂಪಾಯಿ ನೀಡಿರುವ ಕುರಿತು ಚರ್ಚೆ ನಡೆದಿತ್ತು. ಆದ್ರೆ, ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿ ಪಡೆದುಕೊಂಡಿದ್ದಾರೆ. ಉಳಿದ 70 ಸಾವಿರ ರೂಪಾಯಿ ನೀಡಬೇಕಾಗಿತ್ತು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಇದರ ಬೆನ್ನಲ್ಲೇ ಆ.4ರಂದು ರೈತ ವಿಜಯನ್ ಅವರನ್ನೂ ಬಂಧಿಸಲಾಗಿತ್ತು.
ಅದೇ ರೀತಿ ಬಿಹಾರದ ಮತ್ತೊಬ್ಬ ದಂಪತಿ ಕಳೆದ ವರ್ಷ ಆಂಧ್ರದ ಲಾರಿ ಚಾಲಕನಿಗೆ ಮತ್ತೊಂದು ಹೆಣ್ಣು ಮಗುವನ್ನು ಮಾರಾಟ ಮಾಡುತ್ತಿದ್ದರು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಇದಾದ ಬಳಿಕ ಪೊಲೀಸರು ಚೈಲ್ಡ್ ಲೈನ್ ಸಂಸ್ಥೆಯ ನೆರವಿನಿಂದ ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಇದೀಗ ಸರ್ಕಾರಿ ಆಶ್ರಯದಲ್ಲಿ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲಾಗುತ್ತಿದೆ.
ಈ ಪ್ರಕರಣದಲ್ಲಿ ಅಂಜಲಿಯ ತಾಯಿ ಪೂನಂ ದೇವಿ ಮತ್ತು ಆಕೆಯ ಕಿರಿಯ ಮಗಳು ಮೇಘಾ ಕುಮಾರಿ ಅವರನ್ನು ತನಿಖೆಗಾಗಿ ಕೊಯಮತ್ತೂರ್‌ಗೆ ಕರೆಸಲಾಗಿತ್ತು. ಮಹಿಳಾ ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸಿದಾಗ ಬಿಹಾರದ ಬಡ ದಂಪತಿಯಿಂದ ಮಗುವನ್ನು ಖರೀದಿಸಿ ಕೊಯಮತ್ತೂರಿನಲ್ಲಿ ಎರಡೂವರೆ ಲಕ್ಷ ಬೆಲೆಗೆ ಮಾರಾಟ ಮಾಡಿರುವುದು ದೃಢಪಟ್ಟಿದೆ.
ಮಕ್ಕಳ ಮಾರಾಟಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ನಾಲ್ವರು ಸೇರಿದಂತೆ ಈವರೆಗೆ ಐವರನ್ನು ಬಂಧಿಸಲಾಗಿದ್ದು, ಬೇರೆ ಮಕ್ಕಳನ್ನು ಮಾರಾಟ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿ: ಜಮ್ಮುವಿನ ರಿಯಾಸಿಯಲ್ಲಿ ಭದ್ರತಾ ಪಡೆಗಳಿಂದ ಮುಂದುವರಿದ ತೀವ್ರ ಶೋಧ - TERROR ATTACK