ಮುಂಬೈ: ಎನ್‌ಸಿಪಿ ನಾಯಕ ಹಾಗೂ ಮಾಜಿ ಸಚಿವ ಬಾಬಾ ಸಿದ್ದಿಕಿ ಹೈಪ್ರೊಫೈಲ್ ಹತ್ಯೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಮೂಲದ ಸುಜೀತ್ ಸುಶೀಲ್ ಸಿಂಗ್ ಬಂಧಿತ ಆರೋಪಿ. ಮುಂಬೈ ಮತ್ತು ಪಂಜಾಬ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಾಬಾ ಸಿದ್ದಿಕಿ ಅವರ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ಸುಜೀತ್ ಸುಶೀಲ್ ಸಿಂಗ್ ಎಂಬಾತನನ್ನು ಬಂಧಿಸಿರುವುದಾಗಿ ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಬಾಬಾ ಸಿದ್ದಿಕಿ ಹತ್ಯೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಒಟ್ಟು 14 ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಪ್ರಮುಖ ಆರೋಪಿ ಸುಜೀತ್ ಎಂಬ ಮತ್ತೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಜೀತ್ ಪಂಜಾಬ್‌ನ ಲುಧಿಯಾನದ ಸುಂದರ್ ನಗರದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಇತ್ತು. ದಾಳಿ ಮಾಡಿ ಆತನನ್ನು ಬಂಧಿಸಲಾಗಿದೆ. ಸದ್ಯ ಮುಂಬೈಗೆ ಕರೆತರಲಾಗಿದ್ದು, ಮುಂದಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ, ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಆರೋಪಿ ರಾಮ್ ಫುಲ್ಚಂದ್ ಕನೌಜಿಯಾ ಅವರ ಮನೆಯಲ್ಲಿ ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಹಂತಕರ ಫೋನ್ ಪರಿಶೀಲಿಸಿದಾಗ, ಅದರಲ್ಲಿ ಪಿಸ್ತೂಲ್‌ಗಳ ಫೋಟೋಗಳು ಪತ್ತೆಯಾಗಿವೆ. ಬಾಬಾ ಸಿದ್ದಿಕಿ ಅವರ ಹತ್ಯೆ ಮಾಡಲೆಂದೇ ಹಂತಕರು ಐದು ಶಸ್ತ್ರಾಸ್ತ್ರಗಳನ್ನು ಬಳಸಿದ್ದು, ಈ ಪೈಕಿ ನಾಲ್ಕು ಶಸ್ತ್ರಾಸ್ತ್ರಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ. ಸದ್ಯ ಆಸ್ಟ್ರೇಲಿಯಾ ನಿರ್ಮಿತ ಬ್ರೆಟಾ ಪಿಸ್ತೂಲ್‌ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ನನ್ನ ತಂದೆ ಸಿಂಹದಂತೆ, ಅವರ ಘರ್ಜನೆಯನ್ನು ನಾನು ಮುಂದುವರೆಸುತ್ತೇನೆ: ಬಾಬಾ ಸಿದ್ದಿಕಿ ಪುತ್ರ