ಕರ್ನಾಟಕ

karnataka

ETV Bharat / bharat

ಗೂಗಲ್​ ಮ್ಯಾಪ್​ ಎಡವಟ್ಟು, 7 ತಾಸು ಕೆಸರಿನಲ್ಲಿ ಸಿಲುಕಿದ ಮಂಗಳೂರಿನ ಅಯ್ಯಪ್ಪ ಭಕ್ತ; ತಮಿಳುನಾಡು ಪೊಲೀಸರಿಂದ ರಕ್ಷಣೆ - AYYAPPA DEVOTEE STUCK IN MUD

ತಮಿಳುನಾಡು ಪೊಲೀಸರ ಈ ಸಹಾಯಕ್ಕೆ ಕರ್ನಾಟಕ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿ, ಧನ್ಯವಾದ ಅರ್ಪಿಸಿದ್ದಾರೆ.

ayyappa-devotee-stuck-in-mud-after-relying-on-google-maps-police-rescue-him-safely
ಕೆಸರಿನಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಣೆ (ಈಟಿವಿ ಭಾರತ್​​)

By ETV Bharat Karnataka Team

Published : Nov 19, 2024, 3:20 PM IST

ವಟ್ಟಲಕುಂಡು, ಕೇರಳ: ಶಬರಿಮಲೆ ಅಯ್ಯಪ್ಪ ದರ್ಶನ ಮುಗಿಸಿ ಗೂಗಲ್​ ಮ್ಯಾಪ್​ ಸಹಾಯದಿಂದ ಮಂಗಳೂರು ತಲುಪಲು ಮುಂದಾಗಿದ್ದ ಮಂಗಳೂರು ಮೂಲದ ಅಯ್ಯಪ್ಪ ಭಕ್ತರೊಬ್ಬರು 7 ಗಂಟೆಗಳ ಕಾಲ ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಕಡೆಗೆ ಪೊಲೀಸರು ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ಏನಿದು ಘಟನೆ?: ಕರ್ನಾಟಕದ ಮಂಗಳೂರು ಮೂಲದ ಪರಶುರಾಮ ಎಂಬ ವಿಕಲ ಚೇತನರು ಶಬರಿ ಮಲೆ ದರ್ಶನಕ್ಕೆ ತೆರಳಿದ್ದರು. ವಿಕಲಚೇತನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ದ್ವಿಚಕ್ರ ವಾಹನದಲ್ಲಿ ಅವರು ಮಂಗಳೂರಿನಿಂದ ಶಬರಿಮಲೆಗೆ ತೆರಳಿ ಅಲ್ಲಿ ಅಯ್ಯಪ್ಪನ ದರ್ಶನ ಮುಗಿಸಿ ಭಾನುವಾರ ಮರಳುತ್ತಿದ್ದರು.

ಕೆಸರಿನಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಣೆ (ETV Bharat)

ಮರಳುವಾಗ ಶೀಘ್ರ ಮನೆ ತಲುಪಬೇಕು ಎಂದು ಅವರು ಗೂಗಲ್​ ಮ್ಯಾಪ್​ ಮೊರೆ ಹೋದರು. ಈ ವೇಳೆ, ಗೂಗಲ್​ ಮ್ಯಾಪ್​ ಅಡ್ಡ ದಾರಿಯೊಂದನ್ನು ತೋರಿಸಿದೆ. ಭಾನುವಾರ ಸಂಜೆ 7ಕ್ಕೆ ದಿಂಡಿಗಲ್​​ ಜಿಲ್ಲೆಯ ವಟ್ಟಲಕುಂದು ಪಕ್ಕದ ಎಂ.ವಾಡಿಪ್ಪತಿ ಪ್ರದೇಶ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾಗಬೇಕಿದ್ದ ಅವರ ಮಾರ್ಗ ತಪ್ಪಿ, ಸಮುದ್ರ ಕಣ್ಮಾಯಿಗೆ ತೆರಳುವ ರಸ್ತೆಗೆ ಹೋಗಿದ್ದಾರೆ. ಅಲ್ಲಿ ಸೇತುವೆ ದಾಟಿದ ಬಳಿಕ ಅನಿರೀಕ್ಷಿತವಾಗಿ ಕಣ್ಮಾಯಿ ಪ್ರದೇಶದಲ್ಲಿ ಕೆಸರಿನಲ್ಲಿ ಸಿಲುಕಿಕೊಂಡಿದ್ದಾರೆ. ಈ ವೇಳೆ ಮಳೆ ಅಬ್ಬರ ಕೂಡ ಹೆಚ್ಚಾಗಿದ್ದು, ಅಲ್ಲಿಯೇ ಏಳು ಗಂಟೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಸುತ್ತಮುತ್ತ ಯಾರೂ ಇಲ್ಲದ ಕಾರಣ ಅವರ ಸಹಾಯಕ್ಕೆ ಕೂಡ ಯಾರು ನೆರವಾಗಲಿಲ್ಲ.

ಇದನ್ನೂ ಓದಿ:ಶಬರಿಮಲೆಯಿಂದ ಮರಳುವಾಗ ಕರ್ನಾಟಕದ ಯಾತ್ರಾರ್ಥಿಗಳಿದ್ದ ಬಸ್ ಅಪಘಾತ; 27 ಮಂದಿಗೆ ಗಾಯ

ಏಳು ಗಂಟೆಗಳ ಕಾಲ ಕೆಸರಿನಲ್ಲಿ ಸಿಲುಕಿ ಮೇಲೆ ಬರಲು ಸಾಧ್ಯವಾಗದೇ ಒದ್ದಾಡಿದ ಅವರು, ಕಡೆಗೆ ದಿಕ್ಕು ತೋಚದೇ ಕರ್ನಾಟಕದ ಪೊಲೀಸರಿಗೆ ಕರೆ ಮಾಡಿ ಅವರ ಸಹಾಯದಿಂದ ಸಂಬಂಧಿಕರಿಗೂ ವಿಷಯ ಮುಟ್ಟಿಸಿದ್ದಾರೆ. ಕಡೆಗೆ ಕರ್ನಾಟಕ ಪೊಲೀಸರು ದಿಂಡಿಗಲ್​ ಪೊಲೀಸ್​ ಕಂಟ್ರೋಲ್​ ರೂಮ್​ಗೆ ವಿಷಯ ಮುಟ್ಟಿಸಿದ್ದಾರೆ. ಕಡೆಗೆ ದಿಂಡಿಗಲ್​ ಪೊಲೀಸರು ಸಹಾಯಕ್ಕೆ ಆಗಮಿಸಿ ದಿಂಡಿಗಲ್ ಜಿಲ್ಲೆಯ ವಟ್ಟಲಕುಂದು ಬಳಿಯಿರುವ ಎಂ.ವಾಡಿಪ್ಪಟಿ ಸಮುದ್ರಂ ಕಣ್ಮಾಯಿ ಪ್ರದೇಶಕ್ಕೆ ತೆರಳಿ ಅವರ ರಕ್ಷಣೆ ಮಾಡಿದ್ದಾರೆ.

ನಡುರಾತ್ರಿ 2ಕ್ಕೆ ರಕ್ಷಣೆ: ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ವಟ್ಟಲಕುಂದು ಪೊಲೀಸರು, ಮಧ್ಯರಾತ್ರಿ ಸುಮಾರಿಗೆ ಕರ್ನಾಟಕದ ವ್ಯಕ್ತಿ ಕೆಸರು, ಮಳೆಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಣೆ ಮಾಡುವಂತೆ ಜಿಲ್ಲಾ ಎಸ್​ಪಿ ಕಚೇರಿಯಿಂದ ಕರೆ ಬಂದಿತು.

ಜಿಲ್ಲಾ ಎಸ್​ಪಿ ಕಚೇರಿ ನೀಡಿದ ಟವರ್​ ಮಾಹಿತಿ ಆಧಾರದ ಮೇಲೆ ನಾವು ಅಲ್ಲಿಗೆ ತೆರಳಿ, ಕರ್ನಾಟಕದ ವ್ಯಕ್ತಿಯನ್ನು ಸಂಪರ್ಕಿಸಿದೆವು. ಆತ ಕನ್ನಡದಲ್ಲಿ ಮಾತನಾಡುತ್ತಿದ್ದ. ಹೇಗೋ ಅರ್ಥೈಸಿಕೊಂಡು ಆತನ ಬಳಿ ಹೋದೆವು. ವಿಶೇಷ ವಿನ್ಯಾಸದ ವಾಹನ ಕೆಸರಿನಲ್ಲಿ ಸಿಲುಕಿತ್ತು. ಈ ವೇಳೆ ಜೋರು ಮಳೆ ಕೂಡ ಬರುತ್ತಿತ್ತು. ಮಧ್ಯರಾತ್ರಿ 2ಕ್ಕೆ ಆತನನ್ನು ರಕ್ಷಿಸಲಾಯಿತು.

ಆತನ ರಕ್ಷಣೆ ಮಾಡಿ ವಿಚಾರಣೆ ನಡೆಸಿದಾಗ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದು, ಗೂಗಲ್​ ಮ್ಯಾಪ್​ ಸಹಾಯದಿಂದ ಮನೆ ತಲುಪಬೇಕಾದರೆ, ಈ ರೀತಿ ಅನಾಹುತ ನಡೆಯಿತು ಎಂದು ವಿವರಣೆ ನೀಡಿದರು. ತಕ್ಷಣ ಅವರಿಗೆ ಆಹಾರ ವ್ಯವಸ್ಥೆ ಮಾಡಿ, ಮರು ದಿನ ಬೆಳಗ್ಗೆ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪುವ ವ್ಯವಸ್ಥೆ ಮಾಡಲಾಯಿತು ಎಂದು ತಿಳಿಸಿದರು.

ತಮಿಳುನಾಡು ಪೊಲೀಸರ ಈ ಸಹಾಯಕ್ಕೆ ಕರ್ನಾಟಕ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿ, ಧನ್ಯವಾದವನ್ನು ಅರ್ಪಿಸಿದ್ದಾರೆ.

ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕಾಯಕ ಮಾಡುವ ಪರಶುರಾಮ (ETV Bharat)

ಪರಶುರಾಮ ಮೂಲತಃ ಮಂಗಳೂರಿನ ಬೈಕಂಪಾಡಿಯರಾಗಿದ್ದು, ಬಾಲ್ಯದಲ್ಲೇ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಬಹುತೇಕ ಕಾರ್ಯಗಳನ್ನು ತನ್ನ ಕೈಗಳ ಸಹಾಯದಿಂದಲೇ ಮಾಡುತ್ತಾರೆ. ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕಾಯಕ ಮಾಡುವ ಮೂಲಕ ಅಂಗವೈಕಲ್ಯವನ್ನೇ ಮೆಟ್ಟಿ ನಿಂತಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದರಿಂದ ಪರಶುರಾಮ ಇದಕ್ಕೂ ಮುನ್ನ ಭಿಕ್ಷಾಟನೆಯಲ್ಲಿ ತೊಡಗಿದ್ದರು. ಆ ಬಳಿಕ ಭಿಕ್ಷಾಟನೆ ಮಾಡುವುದನ್ನು ಬಿಟ್ಟು, ಮನೆಯೊಂದರ ಸೆಕ್ಯೂರಿಟಿ ಕೆಲಸ ಮಾಡಲು ಆರಂಭಿಸಿದ್ದರು.

ಈಟಿವಿ ಭಾರತದ ಜಿಲ್ಲಾ ಪ್ರತಿನಿಧಿ ವಿನೋದ್​ ಪುದು ಜೊತೆ ದೂರವಾಣಿ ಮೂಲಕ ಮಾತನಾಡಿದ ಪರಶುರಾಮ, 'ಸದ್ಯ ಪೊಲೀಸರ ಸಹಾಯದಿಂದ ಇಂದು ಮಧ್ಯಾಹ್ನ ಸರಕ್ಷಿತವಾಗಿ ಮಂಗಳೂರಿಗೆ ಬಂದು ತಲುಪಿದೆ. ಪೊಲೀಸರ ಈ ಸಹಾಯಕ್ಕೆ ಧನ್ಯವಾದ ಅರ್ಪಿಸುವೆ' ಎಂದಿದ್ದಾರೆ.

ಇದನ್ನೂ ಓದಿ:ಭಿಕ್ಷಾಟನೆ ನಿಲ್ಲಿಸಿ ಡೆಲಿವರಿ ಬಾಯ್‌ ಆಗಿ ಬದುಕು ಕಟ್ಟಿಕೊಂಡ ವಿಶೇಷ ಚೇತನ ಯುವಕ

ABOUT THE AUTHOR

...view details