ಲಖನೌ:ಅಯೋಧ್ಯೆಯಲ್ಲಿ ಸ್ಥಳೀಯ ಸಮಾಜವಾದಿ ಪಕ್ಷದ (ಎಸ್‌ಪಿ) ಸದಸ್ಯ ಹಾಗೂ ಆತನ ಉದ್ಯೋಗಿಯಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ 12 ವರ್ಷದ ಬಾಲಕಿಯ ಕುಟುಂಬ ಆಕೆಯ 12 ವಾರಗಳ ಗರ್ಭವನ್ನು ತೆಗೆದುಹಾಕಲು ಒಪ್ಪಿಗೆ ನೀಡಿದ್ದು, ಇಂದು ಕೆಜಿಎಂಯುನ ಕ್ವೀನ್ ಮೇರಿ ಆಸ್ಪತ್ರೆಯಲ್ಲಿ ಬಾಲಕಿಗೆ ಗರ್ಭಪಾತ ಮಾಡಲಾಯಿತು.
"ಭ್ರೂಣದ ಮಾದರಿಯನ್ನು ಡಿಎನ್‌ಎ ಪರೀಕ್ಷೆಗೆ ತೆಗೆದುಕೊಳ್ಳಲಾಗಿದ್ದು, ಪ್ರಕರಣದ ತನಿಖೆಗೆ ಇದು ನೆರವಾಗಲಿದೆ. ಆರೋಪಿಗಳ ವಿರುದ್ಧದ ಪ್ರಕರಣವನ್ನು ಬಲಪಡಿಸಲು ಡಿಎನ್‌ಎ ಪರೀಕ್ಷೆ ನಡೆಸಲು ನಾವು ಸಿದ್ಧರಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣದ ತಪ್ಪಿತಸ್ಥರನ್ನು ಗುರುತಿಸಿ ಅವರಿಗೆ ಶಿಕ್ಷೆ ವಿಧಿಸಲು ಡಿಎನ್‌ಎ ಪರೀಕ್ಷೆ ನಡೆಸಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿಕೆಯೊಂದರಲ್ಲಿ, "ಅಯೋಧ್ಯೆಯ ಭಾದರ್ಶ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆ ಮಾಡದಿದ್ದರೆ, ಬಿಜೆಪಿಯ ಆರೋಪವನ್ನು ಪಕ್ಷಪಾತವೆಂದು ಪರಿಗಣಿಸಲಾಗುವುದು" ಎಂದು ಹೇಳಿದ್ದಾರೆ.
"ಬಾಲಕಿಯನ್ನು ಆಗಸ್ಟ್ 5ರಂದು ಅಯೋಧ್ಯೆಯಿಂದ ಲಖನೌಗೆ ಕಳುಹಿಸಲಾಯಿತು. ಸದ್ಯ ಆಕೆ ಆರೋಗ್ಯವಾಗಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ. ಅಯೋಧ್ಯೆಯ ಮಹಿಳಾ ಆಸ್ಪತ್ರೆಯಲ್ಲಿ ಸರಿಯಾದ ಆರೈಕೆ ನೀಡಲು ಅಗತ್ಯ ಸೌಲಭ್ಯಗಳ ಕೊರತೆ ಇರುವ ಕಾರಣ, ಬಾಲಕಿಯನ್ನು ಕೆಜಿಎಂಯುಗೆ ಉಲ್ಲೇಖಿಲಾಯಿತು" ಎಂದು ಮುಖ್ಯ ವೈದ್ಯಾಧಿಕಾರಿ ಸಂಜಯ್ ಜೈನ್ ತಿಳಿಸಿದರು.
"12 ವರ್ಷದ ಬಾಲಕಿಯನ್ನು ಆಗಸ್ಟ್ 5 ರಂದು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಕ್ವೀನ್ ಮೇರಿ ಆಸ್ಪತ್ರೆ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗಕ್ಕೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಸ್ಥಿರವಾಗಿದೆ. ತಜ್ಞರ ಮೇಲ್ವಿಚಾರಣೆಯಲ್ಲಿ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಿಕಿತ್ಸೆ ಸಕಾರಾತ್ಮಕ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ. ವೈದ್ಯಕೀಯ ವಿಶ್ವವಿದ್ಯಾಲಯ ತನ್ನ ರೋಗಿಗಳ ಗೌಪ್ಯತೆಯನ್ನು ಗೌರವಿಸುವ ಕಾರಣದಿಂದ ವೈದ್ಯಕೀಯ ವರದಿಗಳು ಮತ್ತು ಚಿಕಿತ್ಸೆಯ ಸಮಯದಲ್ಲಿ ಸಂಗ್ರಹಿಸಿದ ಇತರ ಖಾಸಗಿ ಮಾಹಿತಿ ಹಂಚಿಕೊಳ್ಳಲಾಗುವುದಿಲ್ಲ" ಎಂದು ಕೆಜಿಎಂಯು ವಕ್ತಾರ ಡಾ.ಸುಧೀರ್ ಸಿಂಗ್ ತಿಳಿಸಿದರು.
ಪ್ರಕರಣದ ಹಿನ್ನೆಲೆ: ಪೊಲೀಸ್ ವರದಿಗಳ ಪ್ರಕಾರ, ಸುಮಾರು ಮೂರು ತಿಂಗಳ ಹಿಂದೆ, 12 ವರ್ಷದ ಬಾಲಕಿ ಮೇಲೆ ಸಮಾಜವಾದಿ ಪಕ್ಷದ ಭಾದರ್ಶ ನಗರ ಅಧ್ಯಕ್ಷ ಮೊಯಿದ್ ಖಾನ್ ಮತ್ತು ಅವರ ಸಹಾಯಕ ರಾಜು ಖಾನ್ ಲೈಂಗಿಕ ಕಿರುಕುಳ ನೀಡಿದ್ದರು. ನಂತರದ ಎರಡೂವರೆ ತಿಂಗಳ ಅವಧಿಯಲ್ಲಿ, ಖಾನ್ ಹಲ್ಲೆಯ ವಿಡಿಯೋ ಬಳಸಿಕೊಂಡು ಕಿರುಕುಳ ನೀಡುವುದು ಮತ್ತು ಬೆದರಿಕೆ ಹಾಕುವುದನ್ನು ಮಾಡಿದ್ದನು. ರಾಜು ಖಾನ್ ಸಹಾಯದಿಂದ ಮೊಯಿದ್ ಖಾನ್ ಈ ಕೃತ್ಯ ನಡೆಸಿದ್ದಾನೆ. ಬಾಲಕಿ ಗರ್ಭವತಿಯಾಗಿರುವುದು ಬೆಳಕಿಗೆ ಬಂದ ಬಳಿಕ ಅವರಿಬ್ಬರನ್ನೂ ಕಸ್ಟಡಿಗೆ ತೆಗೆದುಕೊಂಡ ಪೊಲೀಸರು ಜುಲೈ 30 ರಂದು ಜೈಲಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ:ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಆರೋಪಿ 23 ವರ್ಷದ ಅಗ್ನಿವೀರ್ ಯೋಧ ಅರೆಸ್ಟ್ - Agniveer arrested in gang rape case