ಭೋಪಾಲ್(ಮಧ್ಯ ಪ್ರದೇಶ): ಇದೇ ಮೊದಲ ಬಾರಿಗೆ ಮಧ್ಯ ಪ್ರದೇಶದಲ್ಲಿ ಕಡಿಮೆ ಆಲ್ಕೋಹಾಲ್‌ಯುಕ್ತ ಪಾನೀಯಗಳ ಬಾರ್ಗಳು ತಲೆ ಎತ್ತಲು ಸಜ್ಜಾಗಿವೆ. ಹೊಸ ಆರ್ಥಿಕ ವರ್ಷದಿಂದ (ಏಪ್ರಿಲ್ 1) ಹೊಸ ಮದ್ಯ ನೀತಿ ಅಡಿಯಲ್ಲಿ ಇವುಗಳನ್ನು ಕಾಣಬಹುದು. ಇದೇ ವೇಳೆ, 17 ಪವಿತ್ರ ನಗರಗಳೂ ಸೇರಿದಂತೆ 19 ಸ್ಥಳಗಳಲ್ಲಿ ಮದ್ಯ ಮಾರಾಟಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಭಾನುವಾರ ಹೊಸ ಮದ್ಯ ನೀತಿಯನ್ನು ಬಿಡುಗಡೆ ಮಾಡಿದ ಮಧ್ಯ ಪ್ರದೇಶ ಸರ್ಕಾರ, ಕಡಿಮೆ ಆಲ್ಕೋಹಾಲ್‌ಯುಕ್ತ ಪಾನೀಯಗಳ ಬಾರ್‌ಗಳಲ್ಲಿ ಕೇವಲ ಬಿಯರ್, ವೈನ್ ಮತ್ತು ಗರಿಷ್ಠ ಶೇ.10ರಷ್ಟು ವಿ/ವಿ ಆಲ್ಕೋಹಾಲ್ ಅಂಶ ಹೊಂದಿರುವ ರೆಡಿ-ಟು ಡ್ರಿಂಕ್ ಆಲ್ಕೋಹಾಲಿಕ್ ಪಾನೀಯಗಳನ್ನು ಮಾರಾಟ ಮಾಡಲು ಅನುಮತಿಸಿದೆ. ಇಂತಹ ಬಾರ್‌ಗಳಲ್ಲಿ ಹೆಚ್ಚಿನ ಆಲ್ಕೋಹಾಲ್‌ಯುಕ್ತ ಮದ್ಯಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಸದ್ಯ ಮಧ್ಯ ಪ್ರದೇಶದೆಲ್ಲೆಡೆ 460ರಿಂದ 470 ಲಿಕ್ಕರ್, ಬಿಯರ್ ಬಾರ್ಗಳಿವೆ. ಈ ಹೊಸ ಬಾರ್ಗಳಿಂದಾಗಿ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯ ಮಾರಾಟ ನಿರ್ಬಂಧದ ಅಡಿಯಲ್ಲಿ ಏಪ್ರಿಲ್ 1ರಿಂದ 17 ಪವಿತ್ರ ನಗರಗಳು ಸೇರಿದಂತೆ 19 ಸ್ಥಳಗಳಲ್ಲಿ 47 ಮದ್ಯದಂಗಡಿಯನ್ನು ಮುಚ್ಚಲಾಗುವುದು. ಇವುಗಳಲ್ಲಿ ಭಾರತ ನಿರ್ಮಿತ ವಿದೇಶಿ ಮದ್ಯ ಮತ್ತು ಕಂಟ್ರಿ ಲಿಕ್ಕರ್ ಅಂಗಡಿಗಳೂ ಇವೆ. ಉಜ್ಜೈನಿ, ಓಂಕಾರೇಶ್ವರ, ಮಹೇಶ್ವರ್, ಮಂಡ್ಲೇಶ್ವರ್, ಓರ್ಚಾ, ಮೈಹಾರ್, ಚಿತ್ರಕೂಟ, ದಾತಿಯಾ, ಅಮರಕಂಟಕ್ ಮತ್ತು ಸಲ್ಕನ್‌ಪುರನಂತಹ ಕೆಲವು ಪುಣ್ಯ ಕ್ಷೇತ್ರಗಳಲ್ಲಿ ಮಾರಾಟವನ್ನು ಬಂದ್ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಸಿಎಂ ಮೋಹನ್ ಯಾದವ್, "ಜನವರಿ 23ರ ಬಳಿಕ ಹೊಸ ನೀತಿಗೆ ಅಂಕಿತ ಸಿಕ್ಕ ಬಳಿಕ ಮದ್ಯ ಮಾರಾಟ ಬಂದ್ ಮಾಡಲಾಗುವುದು. ಇದರಿಂದಾಗಿ ರಾಜ್ಯ ಸರ್ಕಾರ 450 ಕೋಟಿ ರೂ ಅಬಕಾರಿ ಆದಾಯ ನಷ್ಟ ಅನುಭವಿಸಲಿದೆ. ಹೊಸ ಅಬಕಾರಿ ನೀತಿಯ ಹಿನ್ನೆಲೆಯಲ್ಲಿ ಮುಂದಿನ ಆರ್ಥಿಕ ವರ್ಷದಿಂದ ಲಿಕ್ಕರ್ ಶಾಪ್ ನವೀಕರಣ ಶುಲ್ಕವನ್ನು ಶೇ.20ರಷ್ಟು ಹೆಚ್ಚಿಸಲಾಗುವುದು" ಎಂದು ಹೇಳಿದ್ದಾರೆ.
ಮದ್ಯ ನಿಷೇಧದ ಹಿನ್ನೆಲೆಯಲ್ಲಿ ನಿರ್ಬಂಧಿತ ಸ್ಥಳಗಳಲ್ಲಿ ಹೊರಗಿನಿಂದ ಮದ್ಯ ತಂದು ಕುಡಿಯುವುದಕ್ಕೆ ಯಾವುದೇ ದಂಡವನ್ನು ವಿಧಿಸಿಲ್ಲ. ಈ ರೀತಿಯ ಯಾವುದೇ ನಿರ್ಬಂಧ ಕಾನೂನನ್ನು ಜಾರಿಗೆ ತಂದಿಲ್ಲ. ಬಾರ್ನಲ್ಲಿ ಮದ್ಯ ಮಾರಾಟ ಮತ್ತು ಸೇವನೆಗೆ ಅವಕಾಶವಿಲ್ಲ. ಆದರೆ, ಯಾವುದೇ ವೈಯಕ್ತಿಕ ನಿರ್ಬಂಧವನ್ನು ವಿಧಿಸದ ಹಿನ್ನೆಲೆಯಲ್ಲಿ ಜನರು ವೈಯಕ್ತಿಕವಾಗಿ ಮದ್ಯ ಸೇವಿಸಬಹುದು. ಇದರ ಹೊರತು ಜೊತೆಗೂಡಿ ಸೇವಿಸುವಂತಿಲ್ಲ. ಹೆರಿಟೇಜ್ ಲಿಕ್ಕರ್ ಮತ್ತು ವೈನ್ ಉತ್ಪಾದನೆ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಹೆರಿಟೆಜ್ ಲಿಕ್ಕರ್ ಉತ್ಪಾದನೆಯಲ್ಲಿ ವ್ಯಾಟ್ ವಿನಾಯಿತಿ ಇದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣವೇ ಎಎಪಿ ಹಿನ್ನಡೆಗೆ ಕಾರಣ; ಅಣ್ಣಾ ಹಜಾರೆ ಆಕ್ರೋಶ
ಇದನ್ನೂ ಓದಿ: 36 ಗಂಟೆಗಳಲ್ಲಿ ಐವರು ಅನುಮಾನಾಸ್ಪದ ಸಾವು: ವಿಷಪೂರಿತ ಮದ್ಯ ಸೇವನೆ ಶಂಕೆ