ನವದೆಹಲಿ: 2025ರಲ್ಲಿ ಚಿನ್ನದ ಬೆಲೆಯು ಇಲ್ಲಿಯವರೆಗೆ ಶೇಕಡಾ 11ರಷ್ಟು ಏರಿಕೆಯಾಗಿದ್ದು, ಈಕ್ವಿಟಿಗಳು ಮತ್ತು ಬಿಟ್ ಕಾಯಿನ್ಗಳನ್ನು ಮೀರಿಸಿದೆ ಎಂದು ಉದ್ಯಮ ವರದಿಗಳು ತಿಳಿಸಿವೆ. ಪ್ರತಿ ಔನ್ಸ್ ಚಿನ್ನದ ಬೆಲೆಗಳು 3,000 ಡಾಲರ್ಗೆ ತಲುಪಲಿವೆ ಮತ್ತು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 3,080 ಡಾಲರ್ ದಾಟುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಯುಎಸ್ ತನ್ನ ವ್ಯಾಪಾರ ಸುಂಕಗಳನ್ನು ಹೆಚ್ಚಿಸಿದ ನಂತರ ಯುಎಸ್ ವ್ಯಾಪಾರ ನೀತಿಯ ಸುತ್ತಲೂ ಸಾಕಷ್ಟು ಅನಿಶ್ಚಿತತೆ ಆವರಿಸಿದೆ. ಇದರಿಂದಾಗಿ ಸುರಕ್ಷಿತ ಹೂಡಿಕೆಯಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ವೆಂಚುರಾ ಸೆಕ್ಯುರಿಟೀಸ್ ಹೇಳಿದೆ. ಸ್ಪಾಟ್ ಚಿನ್ನದ ಬೆಲೆಯು ದಾಖಲೆಯ ಗರಿಷ್ಠ 2,943 ಡಾಲರ್ ಮತ್ತು ಕಾಮೆಕ್ಸ್ ಚಿನ್ನ ಔನ್ಸ್ಗೆ 2,968 ಡಾಲರ್ಗೆ ತಲುಪಿದೆ.
ಚಿನ್ನದ ಮೇಲೆ ಸುಂಕ ವಿಧಿಸಲಾಗುವುದು ಎಂಬ ವದಂತಿಗಳ ಕಾರಣದಿಂದ, ತೆರಿಗೆ ವಿಧಿಸುವ ಮುಂಚೆಯೇ ಲಂಡನ್, ಸ್ವಿಟ್ಜರ್ ಲೆಂಡ್ ಮತ್ತು ಏಷ್ಯಾದ ದೇಶಗಳಿಂದ ಚಿನ್ನವನ್ನು ಯುಎಸ್ಗೆ ಸಾಗಿಸಲು ಯತ್ನಗಳು ನಡೆದಿವೆ.
"ವಿತ್ತೀಯ ಕೊರತೆಗಳಲ್ಲಿ ನಿರೀಕ್ಷಿತ ಏರಿಕೆಯನ್ನು ಕಾಪಾಡಿಕೊಳ್ಳಲು ಕೇಂದ್ರ ಬ್ಯಾಂಕುಗಳು ತಮ್ಮ ಮೀಸಲುಗಳಿಗಾಗಿ ಹೆಚ್ಚುವರಿ ಚಿನ್ನ ಖರೀದಿಸುತ್ತಿರುವುದರಿಂದ ಚಿನ್ನವು ದಾಖಲೆಯ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಇದು ಹಣದುಬ್ಬರವನ್ನು ಅನೇಕ ಪಟ್ಟು ಹೆಚ್ಚಿಸಬಹುದು ಮತ್ತು ಬಹುಶಃ ವಿಶ್ವದಾದ್ಯಂತ ಆರ್ಥಿಕ ಹಿಂಜರಿತದ ಭಯವನ್ನು ಉಂಟುಮಾಡಬಹುದು" ಎಂದು ವೆಂಚುರಾ ಸೆಕ್ಯುರಿಟೀಸ್ ತಿಳಿಸಿದೆ.
ಕೇಂದ್ರೀಯ ಬ್ಯಾಂಕುಗಳು 2024ರಲ್ಲಿ 1,045 ಟನ್ ಚಿನ್ನವನ್ನು ಖರೀದಿಸಿವೆ. ಈ ಮೂಲಕ ಸತತ ಮೂರನೇ ವರ್ಷವೂ ಚಿನ್ನದ ಮಾರಾಟ 1,000 ಟನ್ ಮೀರಿದೆ. ಕಳೆದ 3 ವರ್ಷಗಳಲ್ಲಿ, ಕೇಂದ್ರ ಬ್ಯಾಂಕುಗಳು 2022ಕ್ಕಿಂತ ಹಿಂದಿನ 6 ವರ್ಷಗಳಿಗಿಂತ ಹೆಚ್ಚಿನ ಚಿನ್ನವನ್ನು ಖರೀದಿಸಿವೆ.
"ಸುಂಕ ಹೆಚ್ಚಿಸಿದ್ದರಿಂದ ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಆಯ್ಕೆ, ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು, ಹಣದುಬ್ಬರದ ಆತಂಕ, ಕೇಂದ್ರ ಬ್ಯಾಂಕ್ ನೀತಿಗಳು ಮತ್ತು ಕೇಂದ್ರ ಬ್ಯಾಂಕುಗಳು ಮತ್ತು ಚಿಲ್ಲರೆ ಹೂಡಿಕೆದಾರರಿಂದ ನಿರಂತರ ಬಲವಾದ ಬೇಡಿಕೆಯ ಮಿಶ್ರಣದಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ" ಎಂದು ವರದಿ ಹೇಳಿದೆ.
ಸೋಮವಾರದ ಚಿನ್ನದ ದರ: ಎಂಸಿಎಕ್ಸ್ ಚಿನ್ನದ ದರವು ಸೋಮವಾರ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ 10 ಗ್ರಾಂಗೆ 84,946 ರೂ.ಗೆ ಏರಿಕೆಯಾಗಿ 85,162 ರೂ.ಗೆ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಕಾಮೆಕ್ಸ್ ಚಿನ್ನದ ಬೆಲೆ ಪ್ರತಿ ಟ್ರಾಯ್ ಔನ್ಸ್ ಗೆ 2,915 ಡಾಲರ್ ಆಗಿದ್ದರೆ, ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ 2,904 ಡಾಲರ್ (ಬೆಳಿಗ್ಗೆ 9:50 ಕ್ಕೆ) ಆಸುಪಾಸಿನಲ್ಲಿದೆ.
ಇದನ್ನೂ ಓದಿ: ಮಧ್ಯ ಪ್ರದೇಶದಲ್ಲಿ ಹೊಸ ಮದ್ಯ ನೀತಿ: ಕಡಿಮೆ ಆಲ್ಕೋಹಾಲ್‌ಯುಕ್ತ ಬಾರ್‌ಗಳನ್ನು ತೆರೆಯಲು ನಿರ್ಧಾರ - MP NEW EXCISE POLICY