ಕೋಟಾ (ರಾಜಸ್ಥಾನ): ಮೊದಲ ಪ್ರಯತ್ನದಲ್ಲೇ JEE ಮತ್ತು NEETಪರೀಕ್ಷೆಯನ್ನು ತೇರ್ಗಡೆ ಮಾಡುವ ಮೂಲಕ ಸಾಧನೆಗೈದಿದ್ದ 17 ವರ್ಷದ ಟಾಪರ್ ಅವಿಕ್ ದಾಸ್ ತಮ್ಮ ಮುಂದಿನ ವಿದ್ಯಾಭಾಸವನ್ನು ಬೆಂಗಳೂರಿನಲ್ಲಿ ಮಾಡಲಿದ್ದಾರೆ. ಖಗೋಳ ಭೌತಶಾಸ್ತ್ರಜ್ಞನಾಗುವ ಗುರಿ ಹೊಂದಿರುವ ಅವಿಕ್ ದಾಸ್ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ನಲ್ಲಿ ಆಸ್ಟರೋಫಿಸಿಕ್ಸ್ಗೆ ಪ್ರವೇಶ ಪಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬಾಲ್ಯದಿಂದಲೂ ನಾನು ಬಾಹ್ಯಾಕಾಶ, ಆಕಾಶಕಾಯಗಳು, ನಕ್ಷತ್ರಗಳು, ಗೆಲಾಕ್ಸಿಗಳು, ಸೂಪರ್ನೋವಾಗಳು ಮತ್ತು ಕಪ್ಪು ಕುಳಿಗಳ ಬಗ್ಗೆ ಆಸಕ್ತಿ ಹೊಂದಿದ್ದೇನೆ. 5ನೇ ತರಗತಿಯಲ್ಲಿರುವಾಗ ಸ್ಟಿಫನ್ ಹಾಕಿಂಗ್ ಅವರ ಪುಸ್ತಕವನ್ನು ಓದುತ್ತಿದ್ದಾಗ ಅದು ನನಗೆ ಖಗೋಳ ಭೌತಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಪ್ರೇರೇಪಿಸಿತು. ಅಂದಿನಿಂದ ಐಐಎಸ್ಸಿಗೆ ಪ್ರವೇಶ ಪಡೆಯುವುದು ನನ್ನ ಗುರಿಯಾಗಿತ್ತು. ಇದಕ್ಕಾಗಿ ನಾಲ್ಕು ಪ್ರವೇಶಾತಿ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡಿದ್ದೇನೆ. ಜೆಇಇ, ನೀಟ್, ಜೆಇಇ ಅಡ್ವಾನ್ಸ್ಡ್ ಮತ್ತು ಐಎಟಿ ಪರೀಕ್ಷೆಗಳನ್ನು ಪಾಸ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.