ನವದೆಹಲಿ: 2024ರ ಲೋಕಸಭೆ ಚುನಾವಣೆ ಹಾಗೂ ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಶನಿವಾರ ದಿನಾಂಕ ಪ್ರಕಟಿಸಿದೆ. ಲೋಕಸಭೆ ಚುನಾವಣೆಯ ಜೊತೆಗೆ ಸಿಕ್ಕಿಂ, ಅರುಣಾಚಲ ಪ್ರದೇಶ, ಆಂಧ್ರ ಪ್ರದೇಶ ಹಾಗೂ ಒಡಿಶಾ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಎಲ್ಲ ಚುನಾವಣೆಗಳ ಫಲಿತಾಂಶವು ಜೂನ್ 4ರಂದು ಹೊರಬರಲಿದೆ.
ದೆಹಲಿಯಲ್ಲಿ ಇಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕಗಳನ್ನು ಘೋಷಿಸಿದರು. ಲೋಕಸಭೆಗೆ ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ನಾಲ್ಕುಗಳಲ್ಲಿ ಬೇರೆ-ಬೇರೆ ದಿನಾಂಕಗಳಂದು ಮತದಾನ ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:7 ಹಂತಗಳಲ್ಲಿ ಲೋಕಸಭಾ ಚುನಾವಣೆ: ಜೂನ್ 4ಕ್ಕೆ ಫಲಿತಾಂಶ
ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಏಪ್ರಿಲ್ 19 ರಂದು ಮತದಾನ ನಡೆಯಲಿದೆ. ಅರುಣಾಚಲ ಪ್ರದೇಶವು 60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೆ, ಸಿಕ್ಕಿಂ ರಾಜ್ಯವು 32 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. 175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಗೆ ಮೇ 13ರಂದು ಚುನಾವಣೆ ನಡೆಯಲಿದೆ. 147 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಒಡಿಶಾದಲ್ಲಿ ಒಟ್ಟು ನಾಲ್ಕು ಹಂತಗಳಲ್ಲಿ ಮತದಾನ ಜರುಗಲಿದೆ. ಒಡಿಶಾದಲ್ಲಿ ಮೇ 13, 20, 25 ಮತ್ತು ಜೂನ್ 1ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯುಕ್ತರು ವಿವರಿಸಿದರು.
26 ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ: ಇದೇ ವೇಳೆ, ದೇಶದ ವಿವಿಧ ರಾಜ್ಯಗಳಲ್ಲಿ ಅನೇಕ ಕಾರಣಗಳಿಂದ ತೆರವಾದ 26 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೂ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಈ ಪೈಕಿ ಕರ್ನಾಟಕದ ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ನ ರಾಜಾ ವೆಂಕಟಪ್ಪ ನಾಯಕ್ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇತ್ತೀಚೆಗೆ ಅವರು ಅಕಾಲಿಕ ನಿಧನ ಹೊಂದಿದ ಹಿನ್ನೆಲೆ ಈ ಕ್ಷೇತ್ರ ತೆರವಾಗಿದೆ.