ಗುವಾಹಟಿ (ಅಸ್ಸೋಂ):ಅಸ್ಸೋಂನಲ್ಲಿ ನಿಷೇಧಿತ ಸಂಘಟನೆ ಉಲ್ಫಾ(ಐ) ಐಇಡಿ ಮಾದರಿಯ ಸಾಧನಗಳ ಉತ್ಪಾದನೆ, ಸಾಗಣೆ ಅಥವಾ ಎಲ್ಲಾದರೂ ಸ್ಫೋಟಕ್ಕೆ ಇಡುವ ಕುರಿತು ವಿಶ್ವಾಸಾರ್ಹ ಮಾಹಿತಿ ಇದ್ದರೆ, ಅದನ್ನು ಹಂಚಿಕೊಂಡವರಿಗೆ 5 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಅಲ್ಲಿನ ಪೊಲೀಸರು ಘೋಷಣೆ ಮಾಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದು ಅಸ್ಸೋಂನ 24 ಸ್ಥಳಗಳಲ್ಲಿ ಬಾಂಬ್ ಸ್ಪೋಟಿಸುವ ಸಂಚು ರೂಪಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಈ ಕಾರ್ಯಾಚರಣೆ ವಿಫಲವಾಯಿತು ಎಂದು ಉಲ್ಫಾ ತಿಳಿಸಿತ್ತು. ಜೊತೆಗೆ, ಬಾಂಬ್ ಇರಿಸಿದ 19 ಸ್ಥಳಗಳ ಮಾಹಿತಿಯನ್ನು ಹಂಚಿಕೊಂಡು, ಅವುಗಳನ್ನು ನಿಷ್ಕ್ರಿಯಗೊಳಿಸುವಂತೆ ಸಾರ್ವಜನಿಕರಿಗೆ ತಿಳಿಸಿತ್ತು. ಐದು ಸ್ಥಳಗಳಲ್ಲಿನ ಬಾಂಬ್ಗಳ ಪತ್ತೆ ಕಾರ್ಯ ಇನ್ನೂ ಸಾಗಿದೆ.
ಈ ಪ್ರಕರಣವನ್ನು ಭೇದಿಸುವ ವಿಶ್ವಾಸವನ್ನು ಪೊಲೀಸರು ಹೊಂದಿದ್ದು, ವಿವಿಧ ಅಧಿಕಾರಿಗಳಿಗೆ ಈ ತನಿಖಾ ಜವಾಬ್ದಾರಿ ವಹಿಸಲಾಗಿದೆ. ಶುಕ್ರವಾರ ಗುವಾಹಟಿಯಲ್ಲಿ ಐಇಡಿ ಮಾದರಿಯ ಎರಡು ಸಾಧನಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ ಐಇಡಿ ಬಾಂಬ್ ಮಾದರಿಯ ಒಟ್ಟು 10 ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಲಂಖೀಪುರ್ನಲ್ಲಿ ಸ್ಫೋಟಕ ಪತ್ತೆ ಕಾರ್ಯಾಚರಣೆ ಸಂದರ್ಭದಲ್ಲಿ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣ ಸಂಬಂಧ ಮಾತನಾಡಿರುವ ಡಿಜಿಪಿ ಜಿಪಿ ಸಿಂಗ್, ಗುವಾಹಟಿ ನಗರ, ವಿಶೇಷ ಶಾಖೆ, ಸಿಐಡಿ ಮತ್ತು ಇತರ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ. ತನಿಖೆಯ ಸ್ವರೂಪ ಕುರಿತು ಚರ್ಚೆ ನಡೆಸಲಾಗಿದ್ದು, ಈ ಪ್ರಕಾರ ಅನುಸರಣೆ ಮಾಡಲಾಗುವುದು. ಈ ಸಂಬಂಧ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಗುವಾಹಟಿಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ತನಿಖಾಧಿಕಾರಿಗಳು ವಿಶೇಷ ತನಿಖಾ ತಂಡದೊಂದಿಗೆ (ಎಸ್‌ಐಟಿ) ಸಮನ್ವಯ ಸಾಧಿಸಲಿದ್ದಾರೆ. ನಗರದ ಪೊಲೀಸ್ ಆಯುಕ್ತರ ಅಡಿ ಕೆಲಸ ಮಾಡಲಾಗುವುದು ಎಂದರು.
ಇದೇ ವೇಳೆ ಬಹುಮಾನದ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಐಇಡಿ ತರಹದ ಸಾಧನಗಳನ್ನು ತಯಾರಿಸಿದವರು, ಸಾಗಿಸಿದವರು ಮತ್ತು ವಿವಿಧ ಸ್ಥಳಗಳಲ್ಲಿ ಇಡುವ ಕುರಿತು ಯಾವುದಾದರೂ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ನೀಡಿದರೆ 5 ಲಕ್ಷ ರೂ.ವರೆಗೆ ನಗದು ಬಹುಮಾನ ನೀಡುತ್ತೇವೆ ಎಂದು ತಿಳಿಸಿದರು.
ಶನಿವಾರ ಕೂಡ ಡಿಜಿ ಮತ್ತು ಎಸ್ಟಿಎಫ್ ಅಸ್ಸಾಂನ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸುತ್ತಾರೆ. ಈ ಪ್ರಕರಣವನ್ನು ಭೇದಿಸುತ್ತೇವೆಂದು ಶೇಕಡಾ 100ರಷ್ಟು ಖಾತ್ರಿ ಇದೆ. ಶಾಂತಿ ಕದಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಅಸ್ಸೋಂನ 19 ಸ್ಥಳದಲ್ಲಿ ಬಾಂಬ್ ದಾಳಿಗೆ ಸಂಚು; ತಾಂತ್ರಿಕ ಕಾರಣದಿಂದ ತಪ್ಪಿತು ದುರಂತ