ಕರ್ನಾಟಕ

karnataka

ETV Bharat / bharat

ರಷ್ಯಾಗೆ ಪ್ರಯಾಣ ಬೆಳೆಸಿದ ಪ್ರಧಾನಿ ನರೇಂದ್ರ ಮೋದಿ - PM Modi Russia Visit

ಉಕ್ರೇನ್ ಯುದ್ಧದ ನಂತರ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ರಷ್ಯಾಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಕಾರಣದಿಂದಾಗಿ ಪ್ರವಾಸ ಮಹತ್ವ ಪಡೆದುಕೊಂಡಿದೆ. ಏಕೆಂದರೆ, ಇದೇ ಸಮಯದಲ್ಲಿ ಅಮೆರಿಕದಲ್ಲಿ ನ್ಯಾಟೋ ಶೃಂಗಸಭೆ ನಡೆಯುತ್ತಿದೆ.

By ETV Bharat Karnataka Team

Published : Jul 8, 2024, 1:32 PM IST

PM Modi Russia Visit  KREMLIN SPOKESPERSON ON PM MODI  WEST JEALOUSLY WATCHING
ಪುಟಿನ್ ಭೇಟಿಗಾಗಿ ರಷ್ಯಾಗೆ ತೆರಳಿದ ಪ್ರಧಾನಿ ಮೋದಿ (ETV Bharat)

ನವದೆಹಲಿ:ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. 22ನೇ ಭಾರತ-ರಷ್ಯಾ ವಾರ್ಷಿಕ ಸಮ್ಮೇಳನದಲ್ಲಿ ಅವರು ಭಾಗವಹಿಸಲಿದ್ದಾರೆ. ಉಕ್ರೇನ್ ಯುದ್ಧದ ನಂತರ ಮೋದಿ ಮೊದಲ ಬಾರಿಗೆ ರಷ್ಯಾಕ್ಕೆ ಭೇಟಿ ನೀಡುತ್ತಿದ್ದಾರೆ.

ಈ ಕಾರಣದಿಂದಾಗಿ ಮೋದಿ ಪ್ರವಾಸ ಮಹತ್ವ ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ನ್ಯಾಟೋ ಶೃಂಗಸಭೆ ಅಮೆರಿಕದಲ್ಲಿ ನಡೆಯುತ್ತಿದೆ. ಮೋದಿ ರಷ್ಯಾ ಭೇಟಿಯ ಮೇಲೆ ಇಡೀ ವಿಶ್ವವೇ, ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳು ಕಣ್ಣಿಟ್ಟಿವೆ. ಸೋಮವಾರ (ಇಂದು) ಮಧ್ಯಾಹ್ನದ ವೇಳೆಗೆ ಮೋದಿ ರಷ್ಯಾ ತಲುಪಲಿದ್ದಾರೆ. ಇದೇ ವೇಳೆ ಅಮೆರಿಕದಲ್ಲಿ ನಡೆಯಲಿರುವ ನ್ಯಾಟೋ ಶೃಂಗಸಭೆಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.

ಮೋದಿ ರಷ್ಯಾ ಭೇಟಿಗೂ ನ್ಯಾಟೋ ಶೃಂಗಸಭೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ. ಇದಕ್ಕೂ ಮುನ್ನ ಮೋದಿ 2019ರಲ್ಲಿ ರಷ್ಯಾಕ್ಕೆ ತೆಳಿದ್ದರು. ಉಜ್ಬೇಕಿಸ್ತಾನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಕೊನೆಯ ಭೇಟಿಯಾಗಿತ್ತು.

ಇದೇ ವೇಳೆ ರಷ್ಯಾ ಅಧ್ಯಕ್ಷರ ನಿವಾಸದಿಂದ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾತನಾಡಿ, ''ಪಾಶ್ಚಿಮಾತ್ಯ ರಾಷ್ಟ್ರಗಳು ಮೋದಿ ಭೇಟಿಯನ್ನು ಅಸೂಯೆಯಿಂದ ನೋಡುತ್ತಿವೆ'' ಎಂದು ಹೇಳಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಮೋದಿ ಜುಲೈ 8 ಮತ್ತು 9ರಂದು ಮಾಸ್ಕೋದಲ್ಲಿದ್ದು, ನಂತರ ಆಸ್ಟ್ರಿಯಾಕ್ಕೆ ತೆರಳಲಿದ್ದಾರೆ.

ಪ್ರಮುಖ ವಿಚಾರಗಳ ಚರ್ಚೆ ಸಾಧ್ಯತೆ:

  • ಉಕ್ರೇನ್ ಯುದ್ಧದ ನಂತರ ರಷ್ಯಾ ಮೇಲೆ ಅಮೆರಿಕ ಹಲವು ನಿರ್ಬಂಧಗಳನ್ನು ಹೇರಿತ್ತು. ಇದಾದ ಬಳಿಕವೂ ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಆರಂಭಿಸಿತ್ತು. ಉಕ್ರೇನ್ ಯುದ್ಧದ ನಂತರ ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರವು ವೇಗವಾಗಿ ಹೆಚ್ಚಾಯಿತು.
  • 2023-24ರ ಹಣಕಾಸು ವರ್ಷದಲ್ಲಿ ಭಾರತವು 45.4 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಚ್ಚಾ ತೈಲವನ್ನು ಖರೀದಿಸಿತ್ತು. 2023-24ರ ಆರ್ಥಿಕ ವರ್ಷದಲ್ಲಿ ಉಭಯ ದೇಶಗಳ ನಡುವೆ 54 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆದಿತ್ತು. ಭಾರತ ರಷ್ಯಾಕ್ಕೆ ಕೇವಲ 3.3 ಲಕ್ಷ ಕೋಟಿ ರೂಪಾಯಿ ರಫ್ತು ಮಾಡಿತ್ತು. ವ್ಯಾಪಾರದಲ್ಲಿನ ಅಸಮಾನತೆ ಕುರಿತು ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಹೇಳಿದ್ದಾರೆ.
  • ವಾಯು ರಕ್ಷಣಾ ವ್ಯವಸ್ಥೆಗಾಗಿ ಉಪಕರಣಗಳ ಖರೀದಿಸುವ ಕುರಿತು ಚರ್ಚೆ ನಡೆಯಲಿದೆ. ಭಾರತವು 2018 ರಲ್ಲಿ S-400 ವಾಯು ರಕ್ಷಣಾ ವ್ಯವಸ್ಥೆಗಾಗಿ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಅವುಗಳನ್ನು 2023ರಲ್ಲಿ ತಲುಪಿಸಬೇಕಾಗಿತ್ತು. ಆದರೆ, ಉಕ್ರೇನ್ ಯುದ್ಧದಿಂದಾಗಿ ಅದು ವಿಳಂಬವಾಯಿತು. ಈ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ಪುಟಿನ್ ಅವರೊಂದಿಗೆ ಮಾತನಾಡುವ ಸಾಧ್ಯತೆಯಿದೆ.
  • ಜೊತೆಗೆ ವ್ಯಾಪಾರವನ್ನು ಹೆಚ್ಚಿಸಲು ಮತ್ತು ಅದರಲ್ಲಿ ಒಳಗೊಂಡಿರುವ ವೆಚ್ಚವನ್ನು ಕಡಿಮೆ ಮಾಡಲು ಭಾರತ ಮತ್ತು ರಷ್ಯಾ ನಡುವೆ ಹೊಸ ವ್ಯಾಪಾರ ಮಾರ್ಗಗಳ ಕುರಿತು ಮಾತುಕತೆಗಳು ನಡೆಯಬಹುದು. ಭಾರತವು ಇರಾನ್‌ನ ಚಬಹಾರ್ ಬಂದರನ್ನು 10 ವರ್ಷಗಳ ಗುತ್ತಿಗೆಗೆ ತೆಗೆದುಕೊಂಡಿದೆ.
  • ಮಧ್ಯ ಏಷ್ಯಾದ ಮೂಲಕ ರಷ್ಯಾದೊಂದಿಗೆ ಹೊಸ ವ್ಯಾಪಾರ ಮಾರ್ಗಗಳನ್ನು ಪ್ರಾರಂಭಿಸಲು ಭಾರತ ಮಾತುಕತೆ ನಡೆಸಬಹುದು. ಈ ಬಂದರಿನ ಸಹಾಯದಿಂದ ಭಾರತವು ಇರಾನ್, ಅಫ್ಘಾನಿಸ್ತಾನ, ಅರ್ಮೇನಿಯಾ, ಅಜೆರ್ಬೈಜಾನ್, ರಷ್ಯಾ, ಮಧ್ಯ ಏಷ್ಯಾ ಮತ್ತು ಯುರೋಪ್​ ಜೊತೆಗೆ ನೇರ ವ್ಯಾಪಾರ ಮಾಡಬಹುದು.

ಪ್ರಧಾನಿ ಮೋದಿ ಪ್ರತಿಕ್ರಿಯೆ:ಪ್ರವಾಸಹೊರಡುವ ಮುನ್ನ ಮೋದಿ ಸಾಮಾಜಿಕ ಜಾಲತಾಣ ಎಕ್ಸ್​ ಖಾತೆ ಪ್ರತಿಕ್ರಿಯೆ ನೀಡಿದ್ದಾರೆ. ''ಮುಂದಿನ ಮೂರು ದಿನಗಳ ಕಾಲ ನಾನು ರಷ್ಯಾ ಮತ್ತು ಆಸ್ಟ್ರಿಯಾಕ್ಕೆ ಭೇಟಿ ನೀಡುತ್ತೇನೆ. ಈ ಭೇಟಿ ಸ್ನೇಹವನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಲ್ಲಿರುವ ಅನಿವಾಸಿ ಭಾರತೀಯರೊಂದಿಗೆ ಮಾತನಾಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಹೇಳಿಕೆ:ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ವಿನಯ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ''ವಾರ್ಷಿಕ ಸಮ್ಮೇಳನದ ಅಂಗವಾಗಿ ಈ ಪ್ರವಾಸವನ್ನು ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಎರಡೂ ದೇಶಗಳ ದ್ವಿಪಕ್ಷೀಯ ಅಂಶಗಳಿಗೆ ಆದ್ಯತೆ ನೀಡುತ್ತದೆ. ದ್ವಿಪಕ್ಷೀಯ ವ್ಯಾಪಾರ, ಆರ್ಥಿಕ ಸಂಬಂಧಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಯಂತಹ ಕ್ಷೇತ್ರಗಳತ್ತ ಗಮನ ಹರಿಸಲಾಗುವುದು" ಎಂದು ತಿಳಿಸಿದರು.

ಇದನ್ನೂ ಓದಿ:ಮಹಾ ಮಳೆಗೆ ಮುಳುಗಿದ ಮುಂಬೈ: ಶಾಲೆಗಳು ಬಂದ್, ರೈಲು, ವಾಹನ ಸಂಚಾರಕ್ಕೆ ಅಡಚಣೆ - Mumbai Rain

ABOUT THE AUTHOR

...view details