ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ತಮ್ಮನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಿಂಪಡೆದಿದ್ದಾರೆ. ಇಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠದ ಮುಂದೆ ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಶದನ್ ಫರಾಸತ್ ತಮ್ಮ ಕಕ್ಷಿದಾರರು ಅರ್ಜಿ ಹಿಂಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಗುರುವಾರ ಇಡಿ ಅಧಿಕಾರಿಗಳು ಸಿಎಂ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ವಿಚಾರಣೆ ಸಂಬಂಧ ಅನೇಕ ಸಮನ್ಸ್ಗಳನ್ನು ಕೇಜ್ರಿವಾಲ್ ಅವರಿಗೆ ಜಾರಿ ಮಾಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದರ ನಡುವೆ ದೆಹಲಿ ಹೈಕೋರ್ಟ್ ತನಿಖಾ ಸಂಸ್ಥೆಯ ಬಲವಂತದ ಕ್ರಮದಿಂದ ಕೇಜ್ರಿವಾಲ್ ಅವರಿಗೆ ರಕ್ಷಣೆ ನೀಡಲು ನಿರಾಕರಿಸಿತ್ತು. ಇದಾದ ಕೆಲವೇ ಗಂಟೆಗಳನ್ನು 12 ಸದಸ್ಯರ ಇಡಿ ತಂಡ ಸಿಎಂ ನಿವಾಸಕ್ಕೆ ತೆರಳಿ ಬಂಧಿಸಿತ್ತು.
ತಮ್ಮ ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಂದು ಕೇಜ್ರಿವಾಲ್ ಮನವಿ ಆಲಿಸಲು ಸರ್ವೋಚ್ಛ ನ್ಯಾಯಾಲಯವು ಒಪ್ಪಿಕೊಂಡಿತು. ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಸಿಂಘ್ವಿ, ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ತುರ್ತು ಪಟ್ಟಿಗಾಗಿ ಮನವಿ ಮಾಡಿದರು. ಆಗ ನ್ಯಾ.ಚಂದ್ರಚೂಡ್ ಅವರು ನ್ಯಾ.ಸಂಜೀವ್ ಖನ್ನಾ ನೇತೃತ್ವದ ವಿಶೇಷ ತ್ರಿಸದಸ್ಯ ಪೀಠವು ಇದರ ವಿಚಾರಣೆ ನಡೆಸುತ್ತಿದೆ. ಆ ಪೀಠದ ಮುಂದೆ ವಿಷಯವನ್ನು ಪ್ರಸ್ತಾಪಿಸಬಹುದು ಎಂದು ಸಿಂಘ್ವಿ ಅವರಿಗೆ ಸೂಚಿಸಿದರು.