ನವದೆಹಲಿ:ಅಬಕಾರಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮಗೆ ಟೈಪ್ 2 ಮಧುಮೇಹವಿದ್ದರೂ ಪ್ರತಿದಿನ ಮಾವು ಮತ್ತು ಸಿಹಿತಿಂಡಿಗಳಂತಹ ಸಕ್ಕರೆಯ ಅಂಶ ಹೆಚ್ಚಾಗಿರುವ ಆಹಾರಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯವು (ಇಡಿ) ಗುರುವಾರ ನ್ಯಾಯಾಲಯಕ್ಕೆ ಹೇಳಿದೆ. ವೈದ್ಯಕೀಯ ಆಧಾರದಲ್ಲಿ ಜಾಮೀನು ಪಡೆಯುವ ಸಲುವಾಗಿ ಕಾರಣಗಳನ್ನು ಸೃಷ್ಟಿಸಲು ಅವರು ಹೀಗೆ ಮಾಡುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ.
ಸಿಬಿಐ ಮತ್ತು ಇಡಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ಜಾರಿ ನಿರ್ದೇಶನಾಲಯ (ಇಡಿ) ಇಂಥದ್ದೊಂದು ವಾದ ಮಂಡಿಸಿದೆ. ಕೇಜ್ರಿವಾಲ್ ಅವರ ಡಯಟ್ ಚಾರ್ಟ್ ಸೇರಿದಂತೆ ಈ ವಿಷಯದ ಬಗ್ಗೆ ವರದಿ ಸಲ್ಲಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಸಕ್ಕರೆ ಮಟ್ಟದಲ್ಲಿ ಏರಿಳಿತವಾಗುತ್ತಿರುವುದರಿಂದ ತಮ್ಮ ದೈನಂದಿನ ವೈದ್ಯರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಲು ಅನುಮತಿ ನೀಡುವಂತೆ ಕೇಜ್ರಿವಾಲ್ ನ್ಯಾಯಾಲಯಕ್ಕೆ ಮನವಿ ಮಾಡಿರುವುದು ಗಮನಾರ್ಹ. ನ್ಯಾಯಾಲಯವು ಈ ವಿಷಯದ ಬಗ್ಗೆ ನಾಳೆ ಮುಂದಿನ ವಿಚಾರಣೆ ನಡೆಸುವ ಸಾಧ್ಯತೆಯಿದ್ದು, ಅಷ್ಟರೊಳಗೆ ವರದಿ ಸಲ್ಲಿಸುವಂತೆ ನ್ಯಾಯಾಧೀಶರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
"ಅರವಿಂದ್ ಕೇಜ್ರಿವಾಲ್ ಅವರು ಟೈಪ್ 2 ಮಧುಮೇಹ ಹೊಂದಿದ್ದರೂ ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸುತ್ತಿದ್ದಾರೆ. ಅವರು ಪ್ರತಿದಿನ ಆಲೂ ಪೂರಿ, ಮಾವು, ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ. ವೈದ್ಯಕೀಯ ಜಾಮೀನಿಗೆ ಆಧಾರ ಸೃಷ್ಟಿಸಲು ಹೀಗೆ ಮಾಡಲಾಗುತ್ತಿದೆ" ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.