ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕೃತಕ ಮಳೆ ತರಿಸಲು ಮೋಡ ಬಿತ್ತನೆಗೆ ತುರ್ತು ಅನುಮತಿ ನೀಡುವಂತೆ ಕೋರಿ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರಿಗೆ ನಾಲ್ಕು ಬಾರಿ ಪತ್ರ ಬರೆದಿರುವುದಾಗಿ ದಿಲ್ಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. ಕೃತಕ ಮಳೆಯಿಂದ ದೆಹಲಿಯಲ್ಲಿನ ತೀವ್ರ ವಾಯುಮಾಲಿನ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೋಡ ಬಿತ್ತನೆಗೆ ಅನುಮತಿ ಕೋರಿರುವುದಾಗಿ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯ:ದೆಹಲಿಯ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ನಿರಂತರವಾಗಿ 450 ಕ್ಕಿಂತ ಹೆಚ್ಚಿನ ಎಕ್ಯೂಐನಲ್ಲಿ ಮುಂದುವರೆದಿದ್ದು, ಗಾಳಿಯ ಗುಣಮಟ್ಟವು "ತೀವ್ರ ಕಳಪೆ ಪ್ಲಸ್" ವರ್ಗಕ್ಕೆ ಇಳಿದಿರುವ ಮಧ್ಯೆ ಕೇಂದ್ರ ಸರ್ಕಾರವು ಈ ವಿಷಯದಲ್ಲಿ ತಕ್ಷಣವೇ ಮಧ್ಯಪ್ರವೇಶ ಮಾಡಬೇಕು ಎಂದು ಪರಿಸರ ಸಚಿವ ಗೋಪಾಲ್ ರೈ ಮಂಗಳವಾರ ಒತ್ತಾಯಿಸಿದ್ದಾರೆ.
"ಆಗಸ್ಟ್ 30, ಅಕ್ಟೋಬರ್ 10 ಮತ್ತು ಅಕ್ಟೋಬರ್ 23 ರಂದು ಪತ್ರಗಳ ಮೂಲಕ ಪದೇ ಪದೆ ವಿನಂತಿಸಿದರೂ, ಕೇಂದ್ರ ಪರಿಸರ ಸಚಿವರಿಗೆ ಪರಿಸ್ಥಿತಿಯ ಅರಿವಾಗಿಲ್ಲ ಅಥವಾ ಅವರು ದೆಹಲಿ ಸರ್ಕಾರದ ಮನವಿಗಳಿಗೆ ಸ್ಪಂದಿಸಿಲ್ಲ" ಎಂದು ರೈ ತಮ್ಮ ಇತ್ತೀಚಿನ ಪತ್ರದಲ್ಲಿ ತಿಳಿಸಿದ್ದಾರೆ.
ಮಳೆಯಿಂದ ಮಾತ್ರ ತಕ್ಷಣಕ್ಕೆ ಹೊಗೆ ನಿಯಂತ್ರಣ ಸಾಧ್ಯ?:ಅಪಾಯಕಾರಿ ಮಟ್ಟದ ಮಾಲಿನ್ಯವನ್ನು ನಿಭಾಯಿಸಲು ಗ್ರ್ಯಾಪ್ -4 (GRAP-IV) ನಿರ್ಬಂಧಗಳನ್ನು ಜಾರಿಗೆ ತರಲಾಗುತ್ತಿದ್ದರೂ, ನಗರವನ್ನು ಆವರಿಸಿರುವ ದಟ್ಟವಾದ ಹೊಗೆ ಪದರವನ್ನು ಗಾಳಿ ಅಥವಾ ಮಳೆಯಿಂದ ಮಾತ್ರ ನಿವಾರಿಸಬಹುದು ಎಂದು ರೈ ಹೇಳಿದರು.