ಕರ್ನಾಟಕ

karnataka

ETV Bharat / bharat

ಮಣಿಪುರದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶಪಡಿಸಿಕೊಂಡ ಸೇನೆ - Army seizes arms in Manipur - ARMY SEIZES ARMS IN MANIPUR

ಮಣಿಪುರದಲ್ಲಿ ಸೇನಾಪಡೆಗಳು 23 ಶಸ್ತ್ರಾಸ್ತ್ರಗಳು ಸೇರಿ 52 ಕೆಜಿ ತೂಕದ ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ.

ಮಣಿಪುರದಲ್ಲಿ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು
ಮಣಿಪುರದಲ್ಲಿ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು (IANS)

By ETV Bharat Karnataka Team

Published : Sep 30, 2024, 7:02 PM IST

ಕೋಲ್ಕತಾ: ಮಣಿಪುರದಲ್ಲಿ ಸೆ.25ರ ನಂತರ ಈವರೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ಪೂರ್ವ ಕಮಾಂಡ್ ಸೋಮವಾರ ತಿಳಿಸಿದೆ.

"ರಾಜ್ಯದ ವಿವಿಧ ಭಾಗಗಳಿಂದ 23 ಶಸ್ತ್ರಾಸ್ತ್ರಗಳು ಮತ್ತು 52.5 ಕೆಜಿ ಸ್ಫೋಟಕಗಳನ್ನು ತುಂಬಿದ ಹಲವಾರು ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಣಿಪುರ ಪೊಲೀಸರು ಮತ್ತು ಮಣಿಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಭದ್ರತಾ ಪಡೆಗಳ ನಿಕಟ ಸಮನ್ವಯದೊಂದಿಗೆ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಈ ಕಾರ್ಯಾಚರಣೆಗಳನ್ನು ನಡೆಸಿದೆ" ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್ 25 ರಂದು ನಡೆಸಿದ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಅಸ್ಸಾಂ ರೈಫಲ್ಸ್ ಮತ್ತು ಮಣಿಪುರ ಪೊಲೀಸರು ತೌಬಾಲ್ ಜಿಲ್ಲೆಯ ತೆಕ್ಚಾಮ್, ಮ್ಯಾನಿಂಗ್ ಮತ್ತು ಫೈನೋಮ್ ವಿಲೇಜ್ ಪೈನ್ ಫಾರೆಸ್ಟ್ ಪ್ಲಾಂಟೇಶನ್​ನ ಪ್ರದೇಶದಿಂದ 7.62 ಎಂಎಂ ಸೆಲ್ಫ್ ಲೋಡಿಂಗ್ ರೈಫಲ್ (ಎಸ್ಎಲ್ಆರ್), ಎರಡು 9 ಎಂಎಂ ಕಾರ್ಬೈನ್​ಗಳು, 9 ಎಂಎಂ ಪಿಸ್ತೂಲ್, 0.32 ಎಂಎಂ ಪಿಸ್ತೂಲ್, ಗ್ರೆನೇಡ್, ಮದ್ದುಗುಂಡುಗಳು ಮತ್ತು ಇತರ ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.

ಅಸ್ಸಾಂ ರೈಫಲ್ಸ್ ಮತ್ತು ಮಣಿಪುರ ಪೊಲೀಸರು ಅದೇ ಜಿಲ್ಲೆಯ ಸರಮ್​ನಲ್ಲಿ ರಾಜ್ಯ ಹೆದ್ದಾರಿ 18 ರ ಅಡಿ ಇರಿಸಲಾಗಿದ್ದ 10 ಕೆಜಿ ಸ್ಫೋಟಕಗಳನ್ನು ಹೊಂದಿದ್ದ ಐಇಡಿಯನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದು, ಸಂಭವಿಸಬಹುದಾದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ಸೇನೆ ಹೇಳಿದೆ.

ಸೆಪ್ಟೆಂಬರ್ 27 ರಂದು ಅಸ್ಸಾಂ ರೈಫಲ್ಸ್ ಮತ್ತು ಮಣಿಪುರ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ, ಕಾಂಗ್ಪೋಕ್ಪಿ ಜಿಲ್ಲೆಯ ಲೋಚಿಂಗ್ ರಿಡ್ಜ್​ ಬಳಿ ಎರಡು .303 ಬೋಲ್ಟ್ - ಆ್ಯಕ್ಷನ್ ರೈಫಲ್​ಗಳು, 9 ಎಂಎಂ ಪಿಸ್ತೂಲ್, ಗ್ರೆನೇಡ್, ಮದ್ದುಗುಂಡುಗಳು ಮತ್ತು ಇತರ ಯುದ್ಧದಲ್ಲಿ ಬಳಸಲ್ಪಡುವ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಸೆಪ್ಟೆಂಬರ್​ 27ರ ಒಂದು ದಿನದ ನಂತರ, ಭದ್ರತಾ ಪಡೆಗಳು ಅದೇ ಜಿಲ್ಲೆಯ ಐಗೆಜಾಂಗ್ ರಿಡ್ಜ್​ನಿಂದ .303 ಸ್ನೈಪರ್ ರೈಫಲ್, .303 ಬೋಲ್ಟ್ - ಆಕ್ಷನ್ ರೈಫಲ್, ಎರಡು 9 ಎಂಎಂ ಪಿಸ್ತೂಲ್​ಗಳು, ಗ್ರೆನೇಡ್, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ" ಎಂದು ಅವರು ಹೇಳಿದರು.

ಸೆಪ್ಟೆಂಬರ್ 25 ರಂದು ಸೇನೆ, ಮಣಿಪುರ ಪೊಲೀಸರು ಮತ್ತು ಗಡಿ ಭದ್ರತಾ ಪಡೆ (ಬಿಎಸ್ಎಫ್) ಚುರಾಚಂದ್ ಪುರ ಜಿಲ್ಲೆಯಲ್ಲಿ ದಾಳಿ ನಡೆಸಿ ಎರಡು ದೊಡ್ಡ ಮತ್ತು ಭಾರಿ ದೀರ್ಘ-ಶ್ರೇಣಿಯ ಮೋರ್ಟಾರ್ (ಪೊಂಪಿ) ಮತ್ತು ಗ್ರೆನೇಡ್​ಗಳನ್ನು ವಶಪಡಿಸಿಕೊಂಡಿದೆ. ಮತ್ತೆ, ಸೆಪ್ಟೆಂಬರ್ 28 ರಂದು, ಭದ್ರತಾ ಪಡೆಗಳು ಸಾಂಗ್ಡೊಯ್​ನಲ್ಲಿ ಕಾರ್ಯಾಚರಣೆ ನಡೆಸಿ ಮ್ಯಾನ್ಮಾರ್ ಮೂಲದ ಪಿಸ್ತೂಲ್ ಮತ್ತು ಸಿಂಗಲ್ ಬ್ಯಾರೆಲ್ ಬಂದೂಕನ್ನು ವಶಪಡಿಸಿಕೊಂಡಿದ್ದವು.

ಇದನ್ನೂ ಓದಿ : ಸಿಬಿಐ ಆಪರೇಷನ್ ಚಕ್ರ - 3: 4 ರಾಜ್ಯಗಳಲ್ಲಿ ದಾಳಿ, 26 ಸೈಬರ್​ ಕ್ರಿಮಿನಲ್​ಗಳ ಬಂಧನ - CBI arrests cybercriminals

ABOUT THE AUTHOR

...view details