ಜೈಸಲ್ಮೇರ್:ತರಬೇತಿ ಹಾರಾಟದ ವೇಳೆ ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (LAC) ತೇಜಸ್ ಅಪಘಾತಕ್ಕೀಡಾದ ಘಟನೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಇಂದು ನಡೆದಿದೆ.
ಇಲ್ಲಿಯ ಜವಾಹರ್ ಕಾಲೋನಿ ಬಳಿ ಹಾರಾಟ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡ ತೇಜಸ್ ನೆಲಕ್ಕಪ್ಪಳಿಸಿದೆ. ವಿಮಾನ ಅಪಘಾತದ ವೇಳೆ ಅದರಲ್ಲಿ ಇಬ್ಬರು ಪೈಲಟ್ಗಳಿದ್ದು, ತುರ್ತು ಎಜೆಕ್ಟ್ ಆಗುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದಂತೆ ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಘಟನೆಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ. ಉನ್ನತ ಅಧಿಕಾರಿಗಳನ್ನು ತನಿಖೆಗೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಜವಾಹರ್ ಕಾಲೋನಿ ಪ್ರದೇಶದಲ್ಲಿ ಹಾರಾಟ ನಡೆಸಿದ್ದಾಗ ಮೇಘವಾಲ್ ಹಾಸ್ಟೆಲ್ ಕಟ್ಟಡದ ಬಳಿ ತೇಜಸ್ ಅಪಘಾತಕ್ಕೀಡಾಗಿದೆ. ನಂತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತೇಜಸ್‌ನಲ್ಲಿದ್ದ ಪೈಲಟ್ ಮತ್ತು ಸಹ-ಪೈಲಟ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ವಿಷಯ ತಿಳಿದು ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿರುವುದಾಗಿ ತಿಳಿಸಿದೆ.
ಮತ್ತೊಂದೆಡೆ ಇಲ್ಲಿಯ ಪೋಖ್ರಾನ್ ಫೈರಿಂಗ್ ರೇಂಜ್‌ನಲ್ಲಿ 'ಭಾರತ್ ಶಕ್ತಿ' ಹೆಸರಿನಲ್ಲಿ ಮೇಕಿನ್ ಇಂಡಿಯಾ ಅಡಿ ಸ್ಥಳೀಯವಾಗಿ ನಿರ್ಮಿಸಲಾದ ರಕ್ಷಣಾ ಸಾಧನಗಳ ಪ್ರದರ್ಶನ ನಡೆಯುತ್ತಿದೆ. ಇದರಲ್ಲಿ ಎಲ್ಲ ಮೂರು ಸೇನಗಳು ಭಾಗಿಯಾಗಿ ಸಮರಭ್ಯಾಸ ನಡೆಸುತ್ತಿವೆ. ಇದನ್ನು ವೀಕ್ಷಿಸಲು ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಕೂಡ ತೆರಳಿದ್ದಾರೆ. ಇದರ ನಡುವೆಯೇ ಈ ಯುದ್ಧ ವಿಮಾನ ಪತನಗೊಂಡಿದೆ.
ಇದನ್ನೂ ಓದಿ:ಮಿಜೋರಾಂನಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನ, 6 ಮಂದಿಗೆ ಗಾಯ