ನವದೆಹಲಿ:ಏಷ್ಯನ್ ಗೇಮ್ಸ್‌ನಲ್ಲಿ ಈಜು ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಹಿರಿಯ ಅಧಿಕಾರಿಯೊಬ್ಬರು ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಹುದ್ದೆಯಿಂದ ವಜಾಗೊಂಡಿದ್ದಾರೆ. ವಿಶೇಷವೆಂದರೆ, ಇವರ ಸಾಧನೆಗೆ ಅರ್ಜುನ ಪ್ರಶಸ್ತಿಯೂ ಒಲಿದು ಬಂದಿತ್ತು.
ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದು, ಅವರನ್ನು ಹುದ್ದೆಯಿಂದ ವಜಾ ಮಾಡಲು ತನಿಖಾಧಿಕಾರಿಗಳು ಶಿಫಾರಸು ಮಾಡಿದ್ದರು. ಕೇಂದ್ರ ಲೋಕಸೇವಾ ಆಯೋಗದ ನಿರ್ದೇಶನದ ಮೇರೆಗೆ ಕೇಂದ್ರ ಗೃಹ ಸಚಿವಾಲಯವು ಕ್ರಮ ಆದೇಶ ಹೊರಡಿಸಿದೆ.
ಸಿಆರ್‌ಪಿಎಫ್‌ನ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಶ್ರೇಣಿಯ ಮುಖ್ಯ ಕ್ರೀಡಾ ಅಧಿಕಾರಿ ಖಾಜನ್ ಸಿಂಗ್ ಹುದ್ದೆಯಿಂದ ವಜಾಗೊಂಡವರು. ಅವರ ವಿರುದ್ಧ ಅರೆಸೇನಾ ಪಡೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಇತ್ತು.
ತನಿಖೆಯಲ್ಲಿ ಬಯಲು:ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿಗೆ ಲೈಂಗಿಕ ಕಿರುಕುಳದ ಆರೋಪದ ಕೇಳಿಬಂದ ನಂತರ ಇಲಾಖಾ ತನಿಖೆ ನಡೆಸಲಾಗಿದೆ. ಇದರಲ್ಲಿ ಅವರು ತಪ್ಪಿತಸ್ಥರು ಸಾಬೀತಾಗಿದೆ. ತರುವಾಯ, ದೇಶದ ಅತಿದೊಡ್ಡ ಅರೆಸೇನಾ ಪಡೆ, ಕೇಂದ್ರೀಯ ಲೋಕಸೇವಾ ಆಯೋಗಕ್ಕೆ ವರದಿಯನ್ನು ಸಲ್ಲಿಸಿತು. ಬಳಿಕ ಅವರನ್ನು ವಜಾಗೊಳಿಸುವಂತೆ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿತ್ತು.