ಕೋಟಾ (ರಾಜಸ್ಥಾನ):ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆ ತರಬೇತಿಗೆ ಹೆಸರುವಾಸಿಯಾಗಿರುವ ರಾಜಸ್ಥಾನದ ಕೋಟಾದಲ್ಲಿ ಕೋಚಿಂಗ್ ವಿದ್ಯಾರ್ಥಿಗಳ ಆತ್ಮಹತ್ಯೆ ಸರಣಿ ನಿಲ್ಲುವಂತೆ ಕಾಣುತ್ತಿಲ್ಲ. ಏಪ್ರಿಲ್ 29 ರಂದು ಹರಿಯಾಣದ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಇಂದು (ಮಂಗಳವಾರ) ಮತ್ತೊಬ್ಬ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದು ಈ ವರ್ಷದ 8ನೇ ಸಾವಾಗಿದೆ.
ಇಲ್ಲಿನ ಧೋಲ್ಪುರ್ ಜಿಲ್ಲೆಯ ದಿಂಡೋಲಿ ನಿವಾಸಿಯಾದ ಭರತ್ ಸಾವಿಗೀಡಾದ ವಿದ್ಯಾರ್ಥಿ. ಕೋಟಾ ತರಬೇತಿ ಕೇಂದ್ರದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಕಳೆದ ಒಂದು ವರ್ಷದಿಂದ ಚಿಕ್ಕಪ್ಪ ಮತ್ತು ಸೋದರಳಿಯನ ಜೊತೆಗೆ ಪಿಜಿಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದ.
ಇಂದು ಬೆಳಗ್ಗೆ 10:30ಕ್ಕೆ ಸೋದರಳಿಯ ರೋಹಿತ್ ಸಲೂನ್‌ಗೆ ತೆರಳಿದ್ದ. 11 ಗಂಟೆಗೆ ವಾಪಸ್ ಬಂದಾಗ ಭರತ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡಿದ್ದಾನೆ. ಕೋಣೆಯ ಬಾಗಿಲು ಮುಚ್ಚಿದ ಕಾರಣ ಹಿಂದಿನ ಬಾಗಿಲಿನಿಂದ ಪ್ರವೇಶಿಸಿದ್ದಾನೆ. ಬಳಿಕ ಪಿಜಿ ಮಾಲೀಕ ಹಾಗೂ ಇತರರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.