ನವದೆಹಲಿ: ದೇಶಗಳ ಗಡಿ ಮೀರಿದ ಮತ್ತೊಂದು ಪ್ರೇಮ ಕಹಾನಿಯಲ್ಲಿ 25 ವರ್ಷದ ಪಾಕಿಸ್ತಾನಿ ಮಹಿಳೆಯೊಬ್ಬಳು ಕಳೆದ ವಾರ ಅಂತಾರಾಷ್ಟ್ರೀಯ ಗಡಿ ದಾಟಿ ರಾಜಸ್ಥಾನದಲ್ಲಿರುವ ತನ್ನ ಪ್ರಿಯಕರನ ಬಳಿಗೆ ಬಂದು ಸುದ್ದಿಯಾಗಿದ್ದಾಳೆ. ಕಳೆದ ವರ್ಷ ಭಾರತೀಯ ಯುವಕನನ್ನು ಮದುವೆಯಾದ ಸೀಮಾ ಹೈದರ್ ಎಂಬ ಮಹಿಳೆ ಇದೇ ರೀತಿಯ ಕಾರಣಕ್ಕೆ ಸುದ್ದಿಯಾಗಿದ್ದಳು. ಈಗ ಅಂಥದೇ ಮತ್ತೊಂದು ಪ್ರೇಮಕಥೆ ಹೊರಹೊಮ್ಮಿದೆ.
ಈ ಬಾರಿ ಲಾಹೋರ್ನ ಪಾಕಿಸ್ತಾನಿ ಮಹಿಳೆ ಮೆಹ್ವಿಶ್ ಎಂಬಾಕೆಗೆ ಭಾರತದಲ್ಲಿನ ಯುವಕನೋರ್ವನ ಮೇಲೆ ಪ್ರೀತಿ ಹುಟ್ಟಿದೆ. ಈ ಹಿಂದೆ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮೆಹ್ವಿಶ್ 2006 ರಲ್ಲಿ ಲಾಹೋರ್ನ ಬಾದಾಮಿ ಬಾಗ್ನ ವ್ಯಕ್ತಿಯೊಂದಿಗೆ ಮೊದಲ ಮದುವೆಯಾಗಿದ್ದರು. ಈಕೆ 12 ಮತ್ತು 7 ವರ್ಷದ ಇಬ್ಬರು ಗಂಡು ಮಕ್ಕಳ ತಾಯಿ ಕೂಡಾ ಆಗಿದ್ದಾರೆ. ಆದರೆ ದಂಪತಿಯು 2018 ರಲ್ಲಿ ವಿಚ್ಛೇದನ ಪಡೆದಿದ್ದು, ಇವರ ಮಾಜಿ ಪತಿ ನಂತರ ಮರುಮದುವೆಯಾಗಿದ್ದಾರೆ.
ಮೊದಲ ಮದುವೆ ವಿಫಲವಾದ ನಂತರ ರೆಹಮಾನ್ ಸ್ನೇಹ:2018 ರಲ್ಲಿ ತನ್ನ ಮೊದಲ ಮದುವೆ ವಿಫಲವಾದ ನಂತರ, ಇಸ್ಲಾಮಾಬಾದ್ನಲ್ಲಿ ವಾಸಿಸುವ ಮೆಹ್ವಿಶ್, ರಾಜಸ್ಥಾನದ ಬಿಕಾನೇರ್ ಜಿಲ್ಲೆಯವರಾದ ಮತ್ತು ಕುವೈತ್ನಲ್ಲಿ ಟ್ರಾನ್ಸ್ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ ರೆಹಮಾನ್ ಎಂಬಾತನೊಂದಿಗೆ ಸ್ನೇಹ ಬೆಳೆಸಿದರು. ಫೇಸ್ಬುಕ್ನಲ್ಲಿ ಪರಿಚಯವಾದ ಇಬ್ಬರ ಸ್ನೇಹ ಪ್ರೀತಿಯಾಗಿ ಅರಳಿತು.
ನಂತರ ರೆಹಮಾನ್ ಮಾರ್ಚ್ 13, 2022 ರಂದು ಅವಳಿಗೆ ಪ್ರಪೋಸ್ ಮಾಡಿದರು. ಇಬ್ಬರೂ ಮಾರ್ಚ್ 16 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ ಮಾಡಿಕೊಂಡು, 2023 ರಲ್ಲಿ ಮೆಕ್ಕಾದಲ್ಲಿ ಅಧಿಕೃತವಾಗಿ ವಿವಾಹವಾದರು. ಸದ್ಯ ಜುಲೈ 25 ರಂದು ಮೆಹ್ವಿಶ್ 45 ದಿನಗಳ ಪ್ರವಾಸಿ ವೀಸಾ ಪಡೆದು ವಾಘಾ ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ. ಮೆಹ್ವಿಶ್ ಈಗ ರೆಹಮಾನ್ ಅವರೊಂದಿಗೆ ಪೀಥಿಸರ್ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.
ಪಾಕಿಸ್ತಾನ ಮಹಿಳೆ ಚಲನವಲನದ ಮೇಲೆ ಭಾರತದ ನಿಗಾ:ಆದರೆ ಈ ಪಾಕಿಸ್ತಾನಿ ಮಹಿಳೆಯ ಚಲನವಲನದ ಮೇಲೆ ಸ್ಥಳೀಯ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳು ನಿಗಾ ಇಟ್ಟಿವೆ.
ಅಂಜು ಎಂಬ ಭಾರತೀಯ ಮಹಿಳೆ ತನ್ನ ಪ್ರಿಯಕರ ನಸ್ರುಲ್ಲಾ ಜೊತೆ ಸೇರಲು ಒಂದು ತಿಂಗಳ ವೀಸಾ ಪಡೆದು ಪಾಕಿಸ್ತಾನಕ್ಕೆ ಹೋದ ಪ್ರಕರಣ ಈ ಹಿಂದೆ ಗಮನ ಸೆಳೆದಿತ್ತು. ಇಂಥದೇ ಮತ್ತೊಂದು ಪ್ರಕರಣದಲ್ಲಿ- 21 ವರ್ಷದ ಭಾರತೀಯ ಪ್ರಜೆ ಮುಲಾಯಂ ಸಿಂಗ್ ಯಾದವ್ ಎಂಬಾತ ತನ್ನ 19 ವರ್ಷದ ಪಾಕಿಸ್ತಾನಿ ಪತ್ನಿ ಇಕ್ರಾ ಜೀವಾನಿಗೆ ನಕಲಿ ಐಡಿ ಪಡೆಯಲು ಮತ್ತು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಸಹಾಯ ಮಾಡಿದ್ದ. ಆನ್ ಲೈನ್ ಲುಡೋ ಆಡುವಾಗ ಇಬ್ಬರೂ ಸ್ನೇಹ ಬೆಳೆಸಿದ್ದರು ಮತ್ತು ಪ್ರೀತಿಸುತ್ತಿದ್ದರು. ನಂತರ ಭಾರತೀಯ ಅಧಿಕಾರಿಗಳು ಇಕ್ರಾಳನ್ನು ಬಂಧಿಸಿದ ನಂತರ ಅವಳನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಯಿತು. ಇತ್ತ ಮುಲಾಯಂನನ್ನು ವಂಚನೆಯ ಆರೋಪದ ಮೇಲೆ ಜೈಲಿಗೆ ಹಾಕಲಾಯಿತು.
ಇದನ್ನೂ ಓದಿ :Seema Haider: ಕರಾಚಿಯಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ಳಿಂದ 'ಪಾಕಿಸ್ತಾನ ಮುರ್ದಾಬಾದ್' ಘೋಷಣೆ