ತಿರುಪತಿ (ಆಂಧ್ರಪ್ರದೇಶ) :ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನ ಸರ್ವದರ್ಶನ ಟಿಕೆಟ್ ಖರೀದಿಯ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟ ಭಕ್ತರ ಕುಟುಂಬಕ್ಕೆ ಆಂಧ್ರಪ್ರದೇಶ ಸರ್ಕಾರ ತಲಾ 25 ಲಕ್ಷ ರೂಪಾಯಿ ಪರಿಹಾರವನ್ನು ಗುರುವಾರ ಘೋಷಿಸಿದೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತಿಮ್ಮಪ್ಪನ ದರ್ಶನಕ್ಕಾಗಿ ದೇಶದ ವಿವಿಧೆಡೆಯಿಂದ ಭಕ್ತರು ತಿರುಪತಿಗೆ ಆಗಮಿಸಿದ್ದಾರೆ. ಬುಧವಾರ ಸಂಜೆ ಸರ್ವದರ್ಶನ ಟಿಕೆಟ್ ವಿತರಣೆಯ ವೇಳೆ ಜನರು ಏಕಾಏಕಿ ನುಗ್ಗಿದ್ದರಿಂದ ಕಾಲ್ತುಳಿತ ಉಂಟಾಗಿತ್ತು. ಇದರಲ್ಲಿ ಐವರು ಮಹಿಳೆಯರು ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. 40 ಕ್ಕೂ ಅಧಿಕ ಭಕ್ತರು ಗಾಯಗೊಂಡಿದ್ದಾರೆ.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ಭಕ್ತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಚಂದ್ರಬಾಬು ನಾಯ್ಡು ಅವರ ನೇತೃತ್ವದ ಸರ್ಕಾರ ತಿಳಿಸಿದೆ.
ಓದಿ: ತಿರುಪತಿ ಕಾಲ್ತುಳಿತ: ಇಂದು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಭೇಟಿಯಾಗಲಿರುವ ಆಂಧ್ರ ಸಿಎಂ
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಕಂದಾಯ ಮತ್ತು ಮುಜರಾಯಿ ಇಲಾಖೆಯ ಸಚಿವ ಎ. ಸತ್ಯ ಪ್ರಸಾದ್, ಮೃತ ಭಕ್ತರ ಕುಟುಂಬಗಳ ಜೊತೆಗೆ ನಾವಿದ್ದೇವೆ. ಪ್ರಾಣಕ್ಕೆ ಪರ್ಯಾಯವಾಗಿ ಏನನ್ನೂ ಮಾಡಲಾಗದು. ಘಟನೆ ನಡೆದಿರುವುದು ದುರಂತ. ಟಿಕೆಟ್ ವಿತರಣೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.
ಮೃತರ ಕುಟುಂಬಗಳಿಗೆ ನೆರವಾಗಲು ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಶೀಘ್ರದಲ್ಲೇ ಸಿಎಂ ಚಂದ್ರಬಾಬು ನಾಯ್ಡು ಅವರು ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಮುಂದೆ ಇಂತಹ ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಅವರು ಹೇಳಿದರು.
ಅಧಿಕಾರಿಗಳ ವಿರುದ್ಧ ಸಿಎಂ ಗರಂ :ಹಿಂದುಗಳ ಪವಿತ್ರ ಕ್ಷೇತ್ರದಲ್ಲಿ ದುರಂತ ಸಂಭವಿಸಿದ್ದಕ್ಕೆ ಸಿಎಂ ಚಂದ್ರಬಾಬು ನಾಯ್ಡು ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಭಕ್ತರು ಬರುವುದನ್ನು ಗಮನಿಸಿ ಸೂಕ್ತ ವ್ಯವಸ್ಥೆ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಕ್ತರ ಪ್ರಮಾಣದ ಆಧಾರದ ಮೇಳೆ ಹೆಚ್ಚಿನ ಕಡೆಗಳಲ್ಲಿ ಟಿಕೆಟ್ ಕೌಂಟರ್ಗಳನ್ನು ತೆರೆಯಲು ವ್ಯವಸ್ಥೆ ಮಾಡಬೇಕಿತ್ತು. ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಬೇಕಿತ್ತು ಎಂದು ಸಿಎಂ ಗರಂ ಆಗಿದ್ದಾರೆ.
ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ಟಿಕೆಟ್ಗಾಗಿ ನೂಕುನುಗ್ಗಲು; ಕಾಲ್ತುಳಿತದಲ್ಲಿ ಐವರು ಮಹಿಳೆಯರು ಸೇರಿ 6 ಭಕ್ತರು ಸಾವು