ನವದೆಹಲಿ: ಅಮರನಾಥ ಯಾತ್ರೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 4 ಲಕ್ಷ ಭಕ್ತರು ಹಿಮಲಿಂಗದ ದರ್ಶ ಪಡೆದಿದ್ದಾರೆ. ಇಂದು 2,907 ಭಕ್ತರನ್ನು ಹೊಂದಿರುವ ಹೊಸ ಬ್ಯಾಚ್ ತೆರಳಿದೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷ ಇದೇ ಸಮಯಕ್ಕೆ 4.5 ಲಕ್ಷ ಜನರು ಹಿಮಾಕೃತಿಯ ಶಿವಲಿಂಗದ ದರ್ಶನ ಪಡೆದಿದ್ದರು. ಎರಡು ಮಾರ್ಗವಾಗಿ ಬಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗವಾಗಿ ಬಹು ಹಂತದ ಭದ್ರತೆಯೊಂದಿಗೆ ಅಮರನಾಥ ಯಾತ್ರೆ ಸಾಗಿದೆ. 2907 ಯಾತ್ರಿಕರನ್ನು ಒಳಗೊಂಡ ಹೊಸ ತಂಡ ಬುಧವಾರ ಬೆಳಗ್ಗೆ 103 ವಾಹನದಲ್ಲಿ ಜಮ್ಮುವಿನ ಭಗವತಿ ನಗರ್ ಯಾತ್ರಿ ನಿವಾಸದಿಂದ ತೆರಳಿದ್ದಾರೆ.
ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದಲ್ಲಿನ ಗುಹಾ ದೇಗುಲಕ್ಕೆ 26ನೇ ಯಾತ್ರಿಕರ ತಂಡ ಇಂದು ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯಾತ್ರೆಯಲ್ಲಿ 194 ಪುರುಷರು, 598 ಮಹಿಳೆಯರು, 3 ಮಕ್ಕಳು, 31 ಸಾಧು ಮತ್ತು 13 ಸಾಧ್ವಿಯರಿದ್ದಾರೆ. 1134 ಮಂದಿ ಬಲ್ಟಾಲ್ ಮಾರ್ಗದಿಂದ ತೆರಳಿದರೆ, 1,773 ಯಾತ್ರಿಕರು 62 ವಾಹನಗಳಲ್ಲಿ ಪಹಲ್ಗಾಮ್ ಮಾರ್ಗದಿಂದ ತೆರಳಿದ್ದಾರೆ ಎಂದು ಮಾಹಿತಿ ನೀಡಿದರು.
ದರ್ಶನಕ್ಕೆ ತೆರಳುವ ಯಾತ್ರಿಗಳು ಪಹಲ್ಗಾಮ್ ಗುಹೆಯಲ್ಲಿನ ದೇಗುಲಕ್ಕೆ ತೆರಳಲು 48ಕಿ.ಮೀ ದೂರದ ಸಾಂಪ್ರದಾಯಿಕ ಹಾದಿ ಅಥವಾ ಬಾಲ್ಟಲ್ ಗುಹೆ ದೇಗುಲದ ಮೂಲಕ 14 ಕಿ.ಮೀ ಮೂಲಕ ಸಾಗಬಹುದು. ಪಹಲ್ಗಾಮ್ ಹಾದಿ ಹಿಡಿದರೆ, ಶಿವಲಿಂಗನ ದರ್ಶನಕ್ಕೆ 4 ದಿನ ಬೇಕು. ಆದರೆ, ಬಾಲ್ಟಾಲ್ ಮಾರ್ಗ ಶಾರ್ಟ್ಕಟ್ ಆಗಿದ್ದು, ಈ ಹಾದಿ ಮೂಲಕ ಸಾಗಿದಲ್ಲಿ ಅದೇ ದಿನ ದರ್ಶನ ಪಡೆದು, ಬೇಸ್ ಕ್ಯಾಂಪ್ಗೆ ಹಿಂತಿರುಗಬಹುದು.
ಜೂನ್ 28ರಂದು ವರ್ಚುಯಲ್ ಆಗಿ ಅಮರನಾಥ ಯಾತ್ರೆಯ ಪ್ರಾರ್ಥನಾ ಪೂಜೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭಾಗಿಯಾಗುವ ಮೂಲಕ ಯಾತ್ರೆಗೆ ಹಸಿರು ನಿಶಾನೆ ತೋರಿದ್ದರು. ಜೂನ್ 29ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿನ ಮಂಜಿನಾಕೃತಿಯ ಶಿವಲಿಂಗ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮೊದಲ ಬ್ಯಾಚ್ನಲ್ಲಿ 1,28,404 ಯಾತ್ರಿಕರು ಈ ವಾರ್ಷಿಕ ಯಾತ್ರೆಯನ್ನು ನಡೆಸಿದ್ದರು. 52 ದಿನಗಳ ಯಾತ್ರೆ ಮುಂದಿನ ತಿಂಗಳು ಆಗಸ್ಟ್ 19ಕ್ಕೆ ಮುಕ್ತಾಯವಾಗಲಿದೆ.
ಯಾವುದೇ ಸಮಸ್ಯೆಯಾಗದಂತೆ ಸರಾಗವಾಗಿ ಯಾತ್ರೆ ನಡೆಸಲು ಎಲ್ಲ ಭದ್ರತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೂಡಂಕುಳಂ ಅಣು ಸ್ಥಾವರದ ಬಳಿ ಸುತ್ತಾಡುತ್ತಿದ್ದ 6 ರಷ್ಯನ್ನರ ಬಂಧನ, ತೀವ್ರ ವಿಚಾರಣೆ