ಶ್ರೀನಗರ: ಈ ವರ್ಷದ ಅಮರನಾಥ ಯಾತ್ರೆಯ ವಿಧ್ಯುಕ್ತ ಆರಂಭದ ಸಂಕೇತವಾಗಿ ಶನಿವಾರ 'ಪ್ರಥಮ ಪೂಜೆ' ನೆರವೇರಿಸಲಾಯಿತು. ಶ್ರೀ ಅಮರನಾಥ ದೇವಾಲಯ ಮಂಡಳಿಯ (ಎಸ್ಎಎಸ್ಬಿ) ಅಧ್ಯಕ್ಷರೂ ಆಗಿರುವ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, "ವಾರ್ಷಿಕ ಶ್ರೀ ಅಮರನಾಥ ಜಿ ಯಾತ್ರೆಯ ಔಪಚಾರಿಕ ಪ್ರಾರಂಭದ ಗುರುತಾದ 'ಪ್ರಥಮ ಪೂಜೆ'ಯನ್ನು ಇಂದು ನಡೆಸಲಾಯಿತು. ಬಾಬಾ ಅಮರನಾಥಜಿ ದೇವರ ಆಶೀರ್ವಾದವನ್ನು ಕೋರಿದೆ ಮತ್ತು ಎಲ್ಲರಿಗೂ ಉತ್ತಮ ಆರೋಗ್ಯ ನೀಡುವಂತೆ, ಎಲ್ಲರ ಪ್ರಗತಿ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದೆ" ಎಂದು ಬರೆದಿದ್ದಾರೆ.
ಹಿಮಾಲಯದಲ್ಲಿ ಸಮುದ್ರ ಮಟ್ಟದಿಂದ 3888 ಮೀಟರ್ ಎತ್ತರದಲ್ಲಿರುವ ಹಿಮಾಲಯದ ಗುಹಾ ದೇವಾಲಯದ ಪವಿತ್ರ ತೀರ್ಥಯಾತ್ರೆಯು ಕೋಮು ಸೌಹಾರ್ದತೆಯ ಸಂಕೇತವಾಗಿದೆ. ಇಲ್ಲಿನ ಸ್ಥಳೀಯ ಮುಸ್ಲಿಮರು ಯಾತ್ರಿಗಳಿಗೆ ಗುಹೆ ದೇವಾಲಯವನ್ನು ತಲುಪಲು ಸಹಾಯ ಮಾಡುತ್ತಾರೆ ಎಂದು ಅವರು ಹೇಳಿದರು.
"ಎಲ್ಲಾ ಸಮುದಾಯಗಳ ಜನರು ಧರ್ಮಾತೀತವಾಗಿ ಈ ಯಾತ್ರೆಯಲ್ಲಿ ಭಾಗವಹಿಸುವುದು ಜಮ್ಮು ಮತ್ತು ಕಾಶ್ಮೀರದ ಪ್ರಾಚೀನ ಸಂಪ್ರದಾಯವಾಗಿದೆ. ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ಬರುವ ಯಾತ್ರಾರ್ಥಿಗಳನ್ನು ಸ್ವಾಗತಿಸಲು ಮತ್ತು ಸೇವೆ ಸಲ್ಲಿಸಲು ಎಲ್ಲಾ ನಾಗರಿಕರು ಒಗ್ಗೂಡಬೇಕೆಂದು ನಾನು ಕರೆ ನೀಡುತ್ತೇನೆ" ಎಂದು ಮನೋಜ್ ಸಿನ್ಹಾ ಕಮೆಂಟ್ ಮಾಡಿದ್ದಾರೆ.