ಅಮರಾವತಿ:ಆಂಧ್ರಪ್ರದೇಶದಲ್ಲಿ ಹೊಸ ಮದ್ಯ ನೀತಿ ಜಾರಿಯಾಗಿದೆ. ಮದ್ಯದ ನೀತಿಯಡಿ 180 ಎಂಎಲ್ ಬಾಟಲಿಯನ್ನು ಕೇವಲ 99 ರೂಪಾಯಿಗೆ ಖರೀದಿಸಬಹುದು ಎಂದು ಅಲ್ಲಿನ ಸರ್ಕಾರ ಹೇಳಿದೆ.
ಆದಾಯ ಹೆಚ್ಚಳದ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ: ಹೊಸ ಮದ್ಯ ನೀತಿ ಜಾರಿಗೆ ಬಂದಿರುವುದರಿಂದ ಆಂಧ್ರಪ್ರದೇಶದ ಗ್ರಾಹಕರು ಅಗ್ಗದ ದರದಲ್ಲಿ ಮದ್ಯ ಖರೀದಿಸಲು ಸಾಧ್ಯವಾಗುತ್ತದೆ. ಸೆಪ್ಟೆಂಬರ್ 18 ರಂದು ರಾಜ್ಯ ಸಚಿವ ಸಂಪುಟ ಅಂಗೀಕರಿಸಿದ ಈ ನೀತಿಯ ಅಡಿ, ಯಾವುದೇ ಬ್ರಾಂಡ್‌ನ 180 ಮಿಲಿ ಮದ್ಯವನ್ನು 99 ರೂ.ಗೆ ಖರೀದಿಸಲು ಅವಕಾಶವಿದೆ. ಈ ಕ್ರಮದಿಂದ ರಾಜ್ಯ ಸರಕಾರಕ್ಕೆ 5,500 ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
ಹರಿಯಾಣ ಮತ್ತು ಇತರ ರಾಜ್ಯಗಳ ನೀತಿಗಳಂತೆ ಮದ್ಯದ ಮಾರಾಟದಿಂದ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಆಂಧ್ರ ಪ್ರದೇಶ ಸರ್ಕಾರವು ಹೊಸ ಮದ್ಯ ನೀತಿಯನ್ನು ಘೋಷಿಸಿದೆ ಎಂದು ತಿಳಿದು ಬಂದಿದೆ. ರಾಜ್ಯಾದ್ಯಂತ 3,736 ಖಾಸಗಿ ಅಂಗಡಿಗಳಿಗೆ ಪರವಾನಗಿ ನೀಡಲು ಅಧಿಸೂಚನೆ ಸಹ ಹೊರಡಿಸಲಾಗಿದೆ. ಸರ್ಕಾರದ ಅಧಿಸೂಚನೆಯ ಪ್ರಕಾರ, ಭಾರತೀಯ ನಿರ್ಮಿತ ವಿದೇಶಿ ಮದ್ಯ (IMFL) ಮತ್ತು ವಿದೇಶಿ ಮದ್ಯ (FL) ಮಾರಾಟ ಮಾಡಲು ಪರವಾನಗಿಗಳನ್ನು ಆಯ್ಕೆ ಪ್ರಕ್ರಿಯೆಯ ಮೂಲಕ ಖಾಸಗಿ ವ್ಯಕ್ತಿಗಳು ಅಥವಾ ಘಟಕಗಳಿಗೆ ನೀಡಲಾಗುತ್ತದೆ. ಈ ಪರವಾನಗಿಗಳು ಅಕ್ಟೋಬರ್ 12, 2024 ರಿಂದ ಸೆಪ್ಟೆಂಬರ್ 30, 2026 ರವರೆಗೆ ಮಾನ್ಯವಾಗಿರುತ್ತವೆ.
ಸಾಮಾಜಿಕ ನ್ಯಾಯ ತತ್ವದಡಿ ಮದ್ಯದಂಗಡಿಗಳ ಹಂಚಿಕೆ: ಸಬಲೀಕರಣ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ತ್ವದ ಅಡಿ ಹಾಗೂ ಇದರ ಉತ್ತೇಜನಕ್ಕೆ ಹೊಸ ಮದ್ಯ ನೀತಿ ಅನ್ವಯ 'ಗೀತಾ ಕುಲಾಲು' ಸಮುದಾಯಕ್ಕೆ ಒಟ್ಟು 340 ಅಂಗಡಿಗಳನ್ನು ಮಂಜೂರು ಮಾಡಲಾಗಿದೆ. ಲಾಟರಿ ವ್ಯವಸ್ಥೆಯ ಮೂಲಕ ಅಂಗಡಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದರಿಂದಾಗಿ ಅರ್ಜಿದಾರರು ಬಹು ಅಂಗಡಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿ ಅರ್ಜಿದಾರರು ಪ್ರತಿ ಅಂಗಡಿಗೆ 2 ಲಕ್ಷ ರೂಪಾಯಿ ಮರುಪಾವತಿಸಲಾಗದ ಶುಲ್ಕವನ್ನು ಪಾವತಿಸಬೇಕಾಗುತ್ತದೆ.