ಲಖನೌ (ಉತ್ತರಪ್ರದೇಶ): ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು 51ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಜುಲೈ 1, 1973 ರಂದು ಜನಿಸಿದ ಯಾದವ್ ಅವರು ಉತ್ತರ ಪ್ರದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಮಾರ್ಚ್ 2012 ರಲ್ಲಿ ತಮ್ಮ 38ನೇ ವಯಸ್ಸಿನಲ್ಲಿ ಸಿಎಂ ಪಟ್ಟವನ್ನು ಅಲಂಕರಿಸಿದ್ದರು.
ಎಸ್ಪಿ ಕಾರ್ಯಕರ್ತರು ರಾಜ್ಯಾದ್ಯಂತ ಕೇಕ್ ಕತ್ತರಿಸುವುದು, ಸಸಿ ನೆಡುವುದು, ಸಮುದಾಯ ಔತಣ, ಹಣ್ಣು ಹಂಪಲು, ರಕ್ತದಾನ ಸೇರಿದಂತೆ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇಂದು ದೆಹಲಿಯಲ್ಲಿ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿರುವ ಯಾದವ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವಾರು ರಾಜಕೀಯ ವ್ಯಕ್ತಿಗಳಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ಸ್ವೀಕರಿಸಿದ್ದಾರೆ.
ಅಖಿಲೇಶ್ ಯಾದವ್ ಇಟಾವಾ ಜಿಲ್ಲೆಯಲ್ಲಿ ಜನಿಸಿದರು ಮತ್ತು ಮೈಸೂರಿನಲ್ಲಿ ವ್ಯಾಸಂಗ ಮುಗಿಸಿದರು. ಆಗಾಗ್ಗೆ ಸ್ನೇಹಿತರೊಂದಿಗೆ ಊಟಿಗೆ ಭೇಟಿ ನೀಡುತ್ತಿರುತ್ತಾರೆ. ಅಖಿಲೇಶ್ ಯಾದವ್ ಅವರು ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಬ್ಬರಿಗಿಂತ ಕಿರಿಯರು. ರಾಹುಲ್ ಗಾಂಧಿ ಜೂನ್ 19, 1970 ರಂದು ಜನಿಸಿದ್ದು, ಅವರು ಅಖಿಲೇಶ್ ಯಾದವ್ ಅವರಿಗಿಂತ ಮೂರು ವರ್ಷ ದೊಡ್ಡವರು. ಸಿಎಂ ಯೋಗಿ ಆದಿತ್ಯನಾಥ್ ಅವರು ಜೂನ್ 5, 1972 ರಂದು ಜನಿಸಿದ್ದು, ಅವರು ಅಖಿಲೇಶ್ ಯಾದವ್ ಅವರಿಗಿಂತ ಒಂದು ವರ್ಷ ದೊಡ್ಡವರಾಗಿದ್ದಾರೆ.