ಮುಂಬೈ(ಮಹಾರಾಷ್ಟ್ರ):ಮುಂಬರುವ ರಾಜ್ಯಸಭಾ ಚುನಾವಣೆಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಗುರುವಾರ ಎನ್ಸಿಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇತ್ತೀಚಿಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಸುನೇತ್ರಾ ಪವಾರ್ ಪುಣೆಯ ಜಿಲ್ಲೆಯ ಬಾರಾಮತಿ ಕ್ಷೇತ್ರದಲ್ಲಿ ಸೋತಿದ್ದರು.
ಮಹಾರಾಷ್ಟ್ರ, ಅಸ್ಸಾಂ, ಬಿಹಾರದ ತಲಾ ಎರಡು ಮತ್ತು ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತ್ರಿಪುರಾದಲ್ಲಿ ತಲಾ ಒಂದು ಸೇರಿದಂತೆ ಸಂಸತ್ತಿನ ಮೇಲ್ಮನೆಯ ಹತ್ತು ಖಾಲಿಯಿರುವ ಸದಸ್ಯರ ಸ್ಥಾನಗಳಿಗೆ ರಾಜ್ಯಸಭೆಯ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.
ಇದರ ಬೆನ್ನಲ್ಲೇ, ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ವೇಳೆ, ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್, ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮತ್ತು ಲೋಕಸಭೆಯ ಸಂಸದ ಸುನೀಲ್ ತಟ್ಕರೆ ಮತ್ತು ವಿಧಾನಸಭೆಯ ಉಪಸಭಾಪತಿ ನರಹರಿ ಜಿರ್ವಾಲ್ ಮುಂತಾದ ಹಿರಿಯ ನಾಯಕರು ಉಪಸ್ಥಿತರಿದ್ದರು.
ಸಚಿವ, ಹಿರಿಯ ಎನ್ಸಿಪಿ ನಾಯಕ ಛಗನ್ ಭುಜಬಲ್ ಸುದ್ದಿಗಾರರೊಂದಿಗೆ ಮಾತನಾಡಿ, ''ರಾಜ್ಯಸಭಾ ಚುನಾವಣೆಗೆ ಸುನೇತ್ರಾ ಪವಾರ್ ಅವರನ್ನು ಕಣಕ್ಕಿಳಿಸಲು ಎನ್ಸಿಪಿ ನಿರ್ಧರಿಸಿದೆ. ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೆ. ಆದರೆ, ಬುಧವಾರ ಸಂಜೆ ನಡೆದ ಸಭೆಯಲ್ಲಿ ಪಕ್ಷದ ಮುಖಂಡರು ಸುನೇತ್ರಾ ಹೆಸರನ್ನು ಅಂತಿಮಗೊಳಿಸಿದ್ದಾರೆ'' ಎಂದು ತಿಳಿಸಿದರು.