ನವದೆಹಲಿ:ಗೇಣಿದಾರ ಹಾಗೂ ಸಣ್ಣ ರೈತರು ಸರ್ಕಾರದ ಪ್ರಯೋಜನಗಳನ್ನು ಪಡೆಯಲು ವಿಫಲರಾಗುತ್ತಿದ್ದಾರೆ. ಇಂತಹವರಿಗಾಗಿ ಸರ್ಕಾರ ಸ್ಪಷ್ಟವಾದ ನೀತಿಯೊಂದನ್ನು ರೂಪಿಸಬೇಕಾಗಿದೆ ಎಂಬುದು ತಜ್ಞರ ಆಗ್ರಹವಾಗಿದೆ. ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ತಜ್ಞರು, ಭೂ ಗುತ್ತಿಗೆ ಕಾಯ್ದೆಯ ಅನುಪಸ್ಥಿತಿಯಲ್ಲಿ, ಸಣ್ಣ ಹಿಡುವಳಿದಾರರು ಮತ್ತು ಸಣ್ಣ ರೈತರು ಬೆಳೆ ವಿಮೆ, ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಇತರ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದಿಲ್ಲ.
ಈ ಬಗ್ಗೆ ಈಟಿವಿ ಭಾರತ್ ಜತೆ ಮಾತನಾಡಿರುವ ಕೃಷಿ ತಜ್ಞ ಧರ್ಮೇಂದ್ರ ಮಲಿಕ್, " ಸಣ್ಣ ಹಿಡುವಳಿದಾರರು ಅಥವಾ ಸಣ್ಣ ರೈತರು ಸರ್ಕಾರದ ಯೋಜನೆಗಳನ್ನು ಪಡೆಯುವಲ್ಲಿ ಯಾವಾಗಲೂ ವಿಫಲರಾಗುತ್ತಾರೆ. ಆಂಧ್ರ ಪ್ರದೇಶ ಸರ್ಕಾರವು ಕೆಲವು ವರ್ಷಗಳ ಹಿಂದೆ ಅಂತಹ ರೈತರನ್ನು ಗುರುತಿಸಲು ಮತ್ತು ವಿಶಿಷ್ಟ ಗುರುತಿನ ಚೀಟಿಗಳನ್ನು ನೀಡಲು ಉಪಕ್ರಮವನ್ನು ತೆಗೆದುಕೊಂಡಿತು. ಆದರೆ ಭಾರತದ ಉಳಿದ ಭಾಗದಲ್ಲಿ ಇಂತಹ ಯಾವುದೇ ನೀತಿಗಳು ಜಾರಿಗೆ ಬಂದಿಲ್ಲ. ಹೀಗಾಗಿ ಗೇಣಿದಾರ ರೈತರು ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಬಹುತೇಕ ಭೂಮಾಲೀಕರು ಸರ್ಕಾರದ ಎಲ್ಲ ಸವಲತ್ತುಗಳನ್ನು ಪಡೆಯುತ್ತಾರೆ ಮತ್ತು ಹಿಡುವಳಿದಾರರು ಫಸಲ್ ಬಿಮಾ ಯೋಜನೆ, ಕೆಸಿಸಿ ಮತ್ತು ಸಬ್ಸಿಡಿಯಂತಹ ಪ್ರಯೋಜನಗಳಿಂದ ದೂರವೇ ಉಳಿಯುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಭೂ ಮಾಲೀಕರು ಮತ್ತು ಗೇಣಿದಾರ ರೈತರ ನಡುವೆ ಭೂ ಗುತ್ತಿಗೆ ಒಪ್ಪಂದ ಇರುವುದಿಲ್ಲ ಎಂದು ಮಲೀಕ್ ಹೇಳಿದ್ದಾರೆ.