ಲಕ್ನೋ(ಉತ್ತರ ಪ್ರದೇಶ):ಹೊಸ ವರ್ಷದ ಸಂಭ್ರಮಾಚರಣೆಯ ಬಳಿಕ ಯುವಕನೊಬ್ಬ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯನ್ನು ಹೋಟೆಲ್ ರೂಂನಲ್ಲಿ ಬ್ಲೇಡ್‌ನಿಂದ ಇರಿದು ಭೀಕರವಾಗಿ ಹತ್ಯೆಗೈದಿದ್ದಾನೆ. 24 ವರ್ಷದ ಆಗ್ರಾ ಮೂಲದ ಅರ್ಷದ್ ಎಂಬಾತ ಕೊಲೆ ಆರೋಪಿ. ಈತ ಘಟನೆಯ ಕುರಿತು ವಿಡಿಯೋ ಮಾಡಿದ್ದು ಕೃತ್ಯಕ್ಕೆ ಅಸಹಾಯಕತೆ, ಹತಾಶೆ ಹಾಗು ನೆರೆಹೊರೆಯವರ ಕಿರುಕುಳ ಎಂದು ತಿಳಿಸಿದ್ದಾನೆ.
ಲಕ್ನೋದ ನಾಕಾ ಪ್ರದೇಶದಲ್ಲಿರುವ ಶರ್ಂಜೀತ್ ಎಂಬ ಹೆಸರಿನ ಹೋಟೆಲ್ನಲ್ಲಿ ಅರ್ಷದ್, ಹೊಸ ವರ್ಷಾಚರಣೆ ನಡೆಸಿದ ಬಳಿಕ ನಿದ್ರಿಸುತ್ತಿದ್ದ ತನ್ನ ತಾಯಿ ಅಸ್ಮಾ, 9 ವರ್ಷದ ಬಾಲಕಿ, 19 ವರ್ಷದ ಅಲ್ಶಿಯಾ, 18 ವರ್ಷದ ಅಕ್ಸಾ ಮತ್ತು 18 ವರ್ಷದ ರಹ್ಮೀನ್ ಎಂಬವರ ಕತ್ತು ಮತ್ತು ಮಣಿಕಟ್ಟು ಸೀಳಿ ಹತ್ಯೆ ಮಾಡಿದ್ದಾನೆ.
'ಕೊಲೆಗೆ ತಂದೆಯ ಸಹಕಾರ': ಈ ಪ್ರಕರಣದ ತನಿಖೆಗೆ ಮುಂದಾದ ಪೊಲೀಸರು ಮೊದಲು, ಕೌಟುಂಬಿಕ ಕಲಹದಿಂದ ಘಟನೆ ನಡೆದಿದೆ ಎಂದು ತಿಳಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡಿದ್ದು, ಅದರಲ್ಲಿ ಅರ್ಷದ್ ತನ್ನ ತಾಯಿ ಮತ್ತು ಸಹೋದರಿಯನ್ನು ತಾನೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. 6.5 ನಿಮಿಷದ ಸೆಲ್ಫಿ ವಿಡಿಯೋದಲ್ಲಿ ಅರ್ಷದ್, ಕೊಲೆಯಲ್ಲಿ ತನ್ನ ತಂದೆ ಕೂಡಾ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾನೆ.
ಎಸಿಪಿ ಧರ್ಮೇಂದ್ರ ಕುಮಾರ್ ಸಿಂಗ್ ಪ್ರತಿಕ್ರಿಯಿಸಿ, "ಆತನ ತಂದೆ ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ. ಘಟನೆಯಲ್ಲಿ ಆತನ ಪಾತ್ರವೇನು ಎಂಬದನ್ನು ಪತ್ತೆ ಮಾಡಲಾಗುವುದು. ಘಟನಾ ಸ್ಥಳದಲ್ಲಿದ್ದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ" ಎಂದು ಹೇಳಿದರು.
ಅರ್ಷದ್ ವಿಡಿಯೋ: "ನನ್ನ ಕುಟುಂಬದ ಅಸಹಾಯಕತೆ ಮತ್ತು ಹತಾಶೆಯಿಂದಾಗಿ ಬಲವಂತವಾಗಿ ನಾನು ಈ ಕೃತ್ಯ ಎಸಗಿದೆ. ಈ ವಿಡಿಯೋ ಪೊಲೀಸರಿಗೆ ಸಿಕ್ಕಾಗ, ಘಟನೆಗೆ ನಮ್ಮ ನೆರೆಹೊರೆಯವರು, ಸ್ಥಳೀಯರೇ ಕಾರಣಕರ್ತರು ಎಂಬುದು ತಿಳಿಯಲಿ" ಎಂದು ಅರ್ಷದ್ ವಿಡಿಯೋವೊಂದನ್ನು ಮಾಡಿರುವುದಾಗಿ ವರದಿಯಾಗಿದೆ.
ಅರ್ಷದ್ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು- ನೆರೆಹೊರೆಯವರ ಹೇಳಿಕೆ:ಈ ಕುರಿತು ಆಗ್ರಾದ ಇಸ್ಲಾಂ ನಗರದ ನೆರೆಹೊರೆಯವರು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಅರ್ಷದ್ ಕುಟುಂಬ ವಾಸವಿದ್ದ ಸುತ್ತಮುತ್ತಲಿನ ಜನರ ಪ್ರಕಾರ, ಅವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಮೊಹಮದ್ ಅರ್ಷದ್ ಮತ್ತು ಆತನ ತಂದೆ ಮೊಹಮದ್ ಬದರ್ ಕಳೆದ 10-15 ವರ್ಷದಿಂದ ಇಲ್ಲಿ ವಾಸವಿದ್ದು, ಯಾರೊಂದಿಗೂ ಉತ್ತಮ ಸಂಬಂಧ ಹೊಂದಿರಲಿಲ್ಲ. ಅಲ್ಲದೇ ಅವರ ಕುಟುಂಬದಲ್ಲಿನ ಮಹಿಳೆಯರ ಜೊತೆಗೆ ಉತ್ತಮ ವರ್ತನೆ ಹೊಂದಿರಲಿಲ್ಲ ಎಂದಿದ್ದಾರೆ. ಮತ್ತೊಬ್ಬ ನಿವಾಸಿ ಹೇಳುವ ಪ್ರಕಾರ, ಅರ್ಷದ್ ಮತ್ತವರ ತಂದೆ ಹೆಣ್ಣುಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುತ್ತಿರಲಿಲ್ಲ.
ಇದನ್ನೂ ಓದಿ: ಹೊಸ ವರ್ಷದಂದೇ ಭೀಕರ ಕೊಲೆ ; ತಾಯಿ, ನಾಲ್ವರು ಸಹೋದರಿಯರನ್ನು ಕೊಂದ ಯುವಕ!