ನವದೆಹಲಿ:ಬಿಜೆಪಿ ಮತ್ತು ಎನ್‌ಡಿಎ ಮೇಲೆ ಜನರು ಪೂರ್ಣ ಪ್ರಮಾಣದ ಆತ್ಮವಿಶ್ವಾಸವನ್ನು ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣಾ ಫಲಿತಾಂಶವು ದೇಶದ ಜನರು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ನಂಬಿಕೆಯ ಗೆಲುವು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ಇಂದು ಸಂಜೆ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿ ನೆರೆದಿದ್ದ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆಯ ಹಿಂಭಾಗದಲ್ಲಿ 'ಥ್ಯಾಂಕ್ಯೂ ಇಂಡಿಯಾ' ಎಂದು ಉರ್ದು ಸೇರಿದಂತೆ ದೇಶದ ಭಾಷೆಗಳಲ್ಲಿ ಬರೆಯಲಾಗಿತ್ತು.
1962ರ ಬಳಿಕ ಇದೇ ಮೊದಲ ಬಾರಿಗೆ ಒಂದು ಸರ್ಕಾರಕ್ಕೆ ಕೇಂದ್ರದಲ್ಲಿ 3ನೇ ಬಾರಿಗೆ ಬಹುಮತ ದೊರೆತಿದೆ ಎಂದು ಮೋದಿ ತಿಳಿಸಿದರು. ಇದಕ್ಕೂ ಮುನ್ನ ಮೋದಿ "ಜೈ ಜಗನ್ನಾಥ್" ಎನ್ನುತ್ತಾ ಭಾಷಣ ಆರಂಭಿಸಿ, ಒಡಿಶಾದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟ ಜನತೆಗೆ ಧನ್ಯವಾದ ಹೇಳಿದರು.