ನವದೆಹಲಿ: ಬಾಂಗ್ಲಾದೇಶದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕೆಂದು ಕಾಂಗ್ರೆಸ್ ಮಾಜಿ ಮುಖಂಡ ಆಚಾರ್ಯ ಪ್ರಮೋದ್ ಕೃಷ್ಣಂ ಸೋಮವಾರ ಕರೆ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿರುವ ಅವರು, ಬಾಂಗ್ಲಾದೇಶದ ಮೇಲೆ ಜಾಗತಿಕ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕೆಂದು ಹೇಳಿದ್ದಾರೆ.
ಬಾಂಗ್ಲಾದೇಶ ಸರ್ಕಾರ ಭಯೋತ್ಪಾದನೆಯಲ್ಲಿ ತೊಡಗಿದ್ದು, ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ದಮನಿಸುತ್ತಿದೆ ಎಂದು ಅವರು ಆರೋಪಿಸಿದರು.
ಐಎಎನ್ಎಸ್ ಜೊತೆ ಮಾತನಾಡಿದ ಕೃಷ್ಣಂ, "ಬಾಂಗ್ಲಾದೇಶ ಸರ್ಕಾರ ಭಯೋತ್ಪಾದನೆಯ ಹಾದಿಯಲ್ಲಿ ಸಾಗುತ್ತಿದೆ. ಐಸಿಸ್ ಮಾನವೀಯತೆಯ ವಿರುದ್ಧ ದೌರ್ಜನ್ಯ ಎಸಗಿದಂತೆ ಬಾಂಗ್ಲಾದೇಶವು ಹಿಂದೂಗಳ ಮೇಲೆ ದಾಳಿ ನಡೆಸುತ್ತಿದೆ. ಇದು ಮಾನವೀಯತೆ ಮತ್ತು ಸನಾತನ ಧರ್ಮದ ಮೇಲಿನ ದಾಳಿಯಾಗಿದೆ. ಇದು ಧರ್ಮಕ್ಕೆ ಸಂಬಂಧಿಸಿದ ವಿಚಾರವಲ್ಲ, ಇದು ಭಯೋತ್ಪಾದನೆ ಮತ್ತು ದಬ್ಬಾಳಿಕೆಯಾಗಿದೆ. ಶಾಂತಿಯಲ್ಲಿ ನಂಬಿಕೆ ಇರುವ ಎಲ್ಲಾ ಉನ್ನತ ನಾಯಕರು ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸಲು ಬಾಂಗ್ಲಾದೇಶ ಸರ್ಕಾರದೊಂದಿಗೆ ಮಾತನಾಡಬೇಕೆಂದು ನಾನು ವಿನಂತಿಸುತ್ತೇನೆ. ಬಾಂಗ್ಲಾದೇಶ ಮಾತುಕತೆಗಳಿಗೆ ಬಗ್ಗದಿದ್ದರೆ ಇಡೀ ಜಗತ್ತು ಒಗ್ಗೂಡಿ ಅದರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು" ಎಂದು ಅವರು ಹೇಳಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಂ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.