ನವದೆಹಲಿ: ಅಬು ಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಮೊದಲ ಅಧಿಕೃತ ಭೇಟಿ ನೀಡಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ವಿಮಾನ ನಿಲ್ದಾಣದಲ್ಲಿ ಗಣ್ಯರನ್ನು ಔಪಚಾರಿಕವಾಗಿ ಸ್ವಾಗತಿಸಿದರು.
ಅಬು ಧಾಬಿಯ ಯುವರಾಜರಾದ ನಂತರ ಜಾಯೆದ್ ಅಲ್ ನಹ್ಯಾನ್ ಅವರ ಮೊದಲ ಭಾರತ ಭೇಟಿ ಇದಾಗಿದೆ ಮತ್ತು ಅವರೊಂದಿಗೆ ಯುಎಇ ಸರ್ಕಾರದ ಹಲವಾರು ಸಚಿವರು ಮತ್ತು ವ್ಯಾಪಾರ ನಿಯೋಗಗಳು ಆಗಮಿಸಿವೆ. ಯುವರಾಜ ನಹ್ಯಾನ್ ಸೆಪ್ಟೆಂಬರ್ 9ರಂದು ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದು, ದ್ವಿಪಕ್ಷೀಯ ಸಹಕಾರದ ವ್ಯಾಪಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ ಮತ್ತು ರಾಜ್ಘಾರ್ಟ್ಗೆ ತೆರಳಿ ಮಹಾತ್ಮ ಗಾಂಧಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
ಸೆಪ್ಟೆಂಬರ್ 10ರಂದು ನಹ್ಯಾನ್ ಮುಂಬೈಗೆ ಭೇಟಿ ನೀಡಲಿದ್ದು, ವ್ಯಾಪಾರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಎರಡೂ ದೇಶಗಳ ಉದ್ಯಮಿಗಳು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
"ಭಾರತ ಮತ್ತು ಯುಎಇ ಐತಿಹಾಸಿಕವಾಗಿ ನಿಕಟ ಮತ್ತು ಸ್ನೇಹಪರ ಸಂಬಂಧಗಳನ್ನು ಹೊಂದಿವೆ. ಇತ್ತೀಚಿನ ವರ್ಷಗಳಲ್ಲಿ, ಭಾರತ ಮತ್ತು ಯುಎಇ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ರಾಜಕೀಯ, ವ್ಯಾಪಾರ, ಹೂಡಿಕೆ, ಸಂಪರ್ಕ, ಇಂಧನ, ತಂತ್ರಜ್ಞಾನ, ಶಿಕ್ಷಣ ಮತ್ತು ಸಂಸ್ಕೃತಿ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಆಳವಾಗಿದೆ. ಯುವರಾಜರ ಭೇಟಿಯು ಭಾರತ-ಯುಎಇ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ ಮತ್ತು ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಪಾಲುದಾರಿಕೆಗೆ ಮಾರ್ಗಗಳನ್ನು ತೆರೆಯಲಿದೆ" ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಈ ವಾರದ ಆರಂಭದಲ್ಲಿ ಹೇಳಿದೆ.
ಜನವರಿಯಲ್ಲಿ, ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಭಾರತಕ್ಕೆ ಭೇಟಿ ನೀಡಿ ಮೋದಿ ಅವರೊಂದಿಗಿನ ಚರ್ಚೆಯ ಸಮಯದಲ್ಲಿ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುವ ವಿಷಯಗಳ ಬಗ್ಗೆ ಚರ್ಚಿಸಿದ್ದರು. ಅಲ್ಲದೆ ಅವರು ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯ 10 ನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು.
ಜುಲೈ 2023ರಲ್ಲಿ, ಪಿಎಂ ಮೋದಿ ಯುಎಇಗೆ ಭೇಟಿ ನೀಡಿದ್ದರು. 2015ರಿಂದ ಯುಎಇಗೆ ಪ್ರಧಾನಿ ಮೋದಿಯವರ ಐದನೇ ಭೇಟಿ ಇದಾಗಿತ್ತು. 34 ವರ್ಷಗಳಲ್ಲಿ ಯುಎಇಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಟಿಎಂಸಿ ಸಂಸದ ಜವಾಹರ್ ಸರ್ಕಾರ್ ರಾಜೀನಾಮೆ: ಮಮತಾ ಸರ್ಕಾರದ ಭ್ರಷ್ಟಾಚಾರ ಸಹಿಸಲ್ಲ ಎಂದ ಮುಖಂಡ - Jawahar Sarkar Resigns