ಅಜ್ಮೀರ್(ರಾಜಸ್ಥಾನ):1993ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಬ್ದುಲ್ ಕರೀಮ್ ತುಂಡಾನನ್ನು ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳ ತಡೆ ಕಾಯ್ದೆ (ಟಾಡಾ) ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿ ಆದೇಶಿಸಿದೆ. ಇನ್ನಿಬ್ಬರು ಆರೋಪಿಗಳಾದ ಇರ್ಫಾನ್ ಮತ್ತು ಹಮೀದುದ್ದೀನ್ ಎಂಬವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
81 ವರ್ಷದ ತುಂಡಾ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ. ಈತನ ವಿರುದ್ಧದ ಆರೋಪಗಳಿಗೆ ಪುರಾವೆಗಳ ಕೊರತೆಯಿಂದ ಖುಲಾಸೆಗೊಳಿಸಿ ನ್ಯಾಯಾಧೀಶ ಮಹಾವೀರ್ ಪ್ರಸಾದ್ ಗುಪ್ತಾ ಆದೇಶಿಸಿದ್ದಾರೆ. ಇಂದು ಪ್ರಕರಣದ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಪೊಲೀಸರು ಮೂವರನ್ನೂ ಅಜ್ಮೀರ್ ಕೇಂದ್ರ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆದೊಯ್ದು ಹಾಜರುಪಡಿಸಿದ್ದರು.
ಪ್ರಕರಣದ ಹಿನ್ನೆಲೆ:ಬಾಬರಿ ಮಸೀದಿ ಧ್ವಂಸಗೊಂಡು ಒಂದು ವರ್ಷವಾದ ಅಂಗವಾಗಿ 1993ರಲ್ಲಿ ಐದು ಪ್ಯಾಸೆಂಜರ್ ರೈಲುಗಳಲ್ಲಿ ಸ್ಫೋಟಗಳನ್ನು ನಡೆಸಲಾಗಿತ್ತು. ಆ ವರ್ಷದ ಡಿಸೆಂಬರ್ 5-6ರ ಮಧ್ಯರಾತ್ರಿ ಲಖನೌ, ಕಾನ್ಪುರ, ಹೈದರಾಬಾದ್, ಸೂರತ್ ಮತ್ತು ಮುಂಬೈನಲ್ಲಿ ಪ್ಯಾಸೆಂಜರ್ ರೈಲುಗಳಲ್ಲಿ ಈ ಸ್ಫೋಟಗಳು ಸಂಭವಿಸಿದ್ದವು. ಇದರಲ್ಲಿ ಇಬ್ಬರು ಸಾವನ್ನಪ್ಪಿ, ಕನಿಷ್ಠ 22 ಮಂದಿ ಗಾಯಗೊಂಡಿದ್ದರು.
ಇದೀಗ ಪ್ರಕರಣದ ತೀರ್ಪು ಪ್ರಕಟಿಸಿರುವ ಕೋರ್ಟ್, ರೈಲುಗಳಲ್ಲಿ ಬಾಂಬ್ ಸ್ಫೋಟಗಳನ್ನು ಇಟ್ಟು, ರೈಲ್ವೆ ಆಸ್ತಿ ಮತ್ತು ಜನರ ಜೀವನಕ್ಕೆ ಹಾನಿ ಮಾಡುವುದರ ಜೊತೆಗೆ ವಿವಿಧ ಸಮುದಾಯಗಳಲ್ಲಿ ದ್ವೇಷ ಉಂಟುಮಾಡುವ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಮತ್ತೊಂದೆಡೆ, ಆರೋಪಿಗಳು ತನಿಖೆಯ ಸಮಯದಲ್ಲಿ ಜೈಲಿನಲ್ಲಿ ಕಳೆದ ಅವಧಿಯನ್ನು ಆಧರಿಸಿ ತಮ್ಮನ್ನು ಖುಲಾಸೆಗೊಳಿಸುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿದರು. ಆದಾಗ್ಯೂ, ಆರೋಪಿಗಳ ಚಟುವಟಿಕೆಗಳು ಗಂಭೀರ ಸ್ವರೂಪದ್ದಾಗಿದ್ದು, ಕಳೆದ ಜೈಲು ಶಿಕ್ಷೆ ಅಥವಾ ಆರೋಪಿಗಳು ಮಾಡಿದ ಅಪರಾಧವನ್ನು ಪರಿಗಣಿಸಿ ಅವರನ್ನು ಜೀವಾವಧಿ ಶಿಕ್ಷೆಯಿಂದ ಮುಕ್ತಗೊಳಿಸುವುದು ಸಮರ್ಥನೀಯವಲ್ಲ ಎಂದು ಹೇಳಿದೆ.