ಕರ್ನಾಟಕ

karnataka

ETV Bharat / bharat

ಜಾರ್ಖಂಡ್​, ಮಹಾರಾಷ್ಟ್ರ ಚುನಾವಣೆಗೆ ಆಪ್‌ ಸ್ಪರ್ಧೆ ಡೌಟ್‌: 'ಇಂಡಿಯಾ' ಬೆಂಬಲಿಸುವ ಸಾಧ್ಯತೆ - AAP ELECTION STRATEGY

ಜಾರ್ಖಂಡ್​​ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಮ್​​ ಆದ್ಮಿ ಪಕ್ಷವು (ಆಪ್​) ಸ್ಪರ್ಧೆ ಮಾಡದೇ, ಇಂಡಿಯಾ ಕೂಟದ ಮಿತ್ರಪಕ್ಷಗಳಿಗೆ ನೆರವಾಗಲು ಬಯಸಿದ್ದಾಗಿ ತಿಳಿದು ಬಂದಿದೆ.

ಜಾರ್ಖಂಡ್​, ಮಹಾರಾಷ್ಟ್ರ ವಿಧಾನಸಭೆ ಎಲೆಕ್ಷನ್ನಲ್ಲಿ ಆಪ್ ಸ್ಪರ್ಧೆ ಇಲ್ಲ
ಆಮ್ ಆದ್ಮಿ ಪಕ್ಷ (ETV Bharat)

By ANI

Published : Oct 17, 2024, 6:19 PM IST

ನವದೆಹಲಿ:ರಾಷ್ಟ್ರೀಯ ಪಕ್ಷವಾಗಿರುವ ಆಮ್​​ ಆದ್ಮಿ (ಆಪ್​) ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. I.N.D.I ಕೂಟದ ಭಾಗವಾಗಿರುವ ಆಪ್​ ಅದರ ಬಲವರ್ಧನೆಗಾಗಿ ಅಖಾಡದಿಂದ ದೂರ ಉಳಿಯಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಎರಡೂ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಬಯಸಿದ್ದು, ಇಂಡಿಯಾ ಕೂಟದ ಮಿತ್ರ ಪಕ್ಷಗಳಿಗೆ ನೆರವಾಗಲು ಬಯಸಿದೆ. ಹೀಗಾಗಿ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸುವ ಸಾಧ್ಯತೆ ಕಡಿಮೆ ಎಂದು ರಾಜಕೀಯ ಪಡಸಾಲೆಯಲ್ಲಿ ಮಾತುಗಳು ಕೇಳಿಬಂದಿವೆ.

ಆದಾಗ್ಯೂ, ಎರಡೂ ರಾಜ್ಯಗಳ ಘಟಕಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಯಸಿವೆ. ಇದಕ್ಕಾಗಿ ತಯಾರಿಯನ್ನೂ ಮಾಡಿವೆ. ಪಕ್ಷದ ಬಲವರ್ಧನೆ ಮತ್ತು ಸಾಂಸ್ಥಿಕ ವಿಸ್ತರಣೆಗಾಗಿ ಚುನಾವಣೆ ಎದುರಿಸಲು ರಾಜ್ಯಗಳ ನಾಯಕರು ಉತ್ಸುಕರಾಗಿದ್ದಾರೆ. ಆದರೆ, ಇದಕ್ಕೆ ಪಕ್ಷದ ಹೈಕಮಾಂಡ್​​ನಿಂದ ಒಪ್ಪಿಗೆ ಸಿಗುವುದು ಅಸಂಭವ ಎಂದು ಹೇಳಲಾಗಿದೆ.

ಜಾರ್ಖಂಡ್​ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಇಂಡಿಯಾ ಕೂಟದ ಮಿತ್ರಪಕ್ಷಗಳು ಗೆಲ್ಲುವುದು ಆಪ್​ನ ಗಮನವಾಗಿದೆ. ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುವ ಬದಲು, ಮತದಾರರಲ್ಲಿ ಯಾವುದೇ ಗೊಂದಲ ಉಂಟು ಮಾಡಲು ಬಯಸದ ಕಾರಣ ಚುನಾವಣಾ ಅಖಾಡದಿಂದಲೇ ಹಿಂದೆ ಸರಿಯಲು ಯೋಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ದೆಹಲಿ ಚುನಾವಣೆ ಮೇಲೆ ಗಮನ:ಮುಂದಿನ ವರ್ಷದ ಆರಂಭದಲ್ಲಿ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಶತಾಯಗತಾಯ ಮರಳಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಪಕ್ಷದ ನಾಯಕರು ಗಮನ ಕೇಂದ್ರೀಕರಿಸಿದ್ದಾರೆ. ಹೀಗಾಗಿ ಉಳಿದ ರಾಜ್ಯಗಳ ಚುನಾವಣೆಯ ಮೇಲೆ ಹೆಚ್ಚು ಒತ್ತು ನೀಡುವ ಬದಲಿಗೆ ರಾಷ್ಟ್ರ ರಾಜಧಾನಿಯನ್ನೇ ಟಾರ್ಗೆಟ್​ ಮಾಡಿದ್ದಾರೆ.

ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಮತ್ತು ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಅವರು ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯ ಕಚೇರಿಯಲ್ಲಿ ಬೂತ್ ಮಟ್ಟದ ಪ್ರಮುಖರ ಸಭೆ ನಡೆಸಿದ್ದರು. ಇದರಲ್ಲಿ ಈಗಿನಿಂದಲೇ ಚುನಾವಣೆ ತಯಾರಿ ನಡೆಸಿ ಎಂದು ಸೂಚಿಸಿದ್ದರು.

ಮುಂದಿನ ವರ್ಷ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು. ಪ್ರತಿ ಬೂತ್​​ ಅನ್ನು ಮತ್ತಷ್ಟು ಭದ್ರಪಡಿಸಬೇಕು. ವಿಪಕ್ಷ ಬಿಜೆಪಿ ಪಕ್ಷದ ವಿರುದ್ಧ ಪಿತೂರಿ ನಡೆಸಲಿದೆ. ಬಿಜೆಪಿಯ ಯಾವುದೇ ಬಲೆಗೆ ಬೀಳದಂತೆ ಮತ್ತು ರಾಜ್ಯದ ಜನರಿಗೆ ಉತ್ತಮ ಕೆಲಸಗಾರರು ಯಾರು ಎಂಬುದನ್ನು ಮನವರಿಗೆ ಮಾಡಿಕೊಡುವಂತೆ ಪ್ರಮುಖರಿಗೆ ಸೂಚಿಸಲಾಗಿದೆ.

ಇದಕ್ಕೂ ಮೊದಲು, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹರಿಯಾಣ ಚುನಾವಣಾ ಫಲಿತಾಂಶ ದೊಡ್ಡ ಪಾಠ. ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರಬಾರದು. ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಕೆಲಸ ಮಾಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದರು.

2020ರ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಆಪ್​ 62ರಲ್ಲಿ ಗೆದ್ದಿತ್ತು. ಬಿಜೆಪಿ ಉಳಿದ 8 ಸ್ಥಾನ ಜಯಿಸಿತ್ತು.

ಇದನ್ನೂ ಓದಿ:ರೈಲ್ವೆ ಟಿಕೆಟ್​ 4 ತಿಂಗಳಿಗೂ ಮೊದಲು ಬುಕ್​ ಮಾಡುವಂತಿಲ್ಲ: ಸರ್ಕಾರದಿಂದ ಹೊಸ ನಿಯಮ​ ಜಾರಿ

ABOUT THE AUTHOR

...view details