ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಆಪ್​ಗೆ ಶಾಕ್​: ಶಾಸಕ, ಮಾಜಿ ಮಂತ್ರಿ ಬಿಜೆಪಿ ಸೇರ್ಪಡೆ; ಸಿಎಂ ಕೇಜ್ರಿವಾಲ್​ ವಿರುದ್ಧ ಟೀಕೆ - Aap Mla joined BJP

ಆಪ್​ ಪಕ್ಷದ ಇಬ್ಬರು ದೆಹಲಿ ನಾಯಕರು ಪಕ್ಷ ತೊರೆದು ಬಿಜೆಪಿ ಸೇರಿ ಶಾಕ್​ ನೀಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲವ್ಲಿ ಸಿಂಗ್​ ಬಿಜೆಪಿ ಸೇರಿದ ಬಳಿಕ ಆಪ್​ನಿಂದಲೂ ನಾಯಕರು ವಲಸೆ ಬಂದಿದ್ದಾರೆ.

By PTI

Published : Jul 10, 2024, 4:19 PM IST

ಆಪ್​ ಶಾಸಕ, ಮಾಜಿ ಮಂತ್ರಿ ಬಿಜೆಪಿ ಸೇರ್ಪಡೆ
ಆಪ್​ ಶಾಸಕ, ಮಾಜಿ ಮಂತ್ರಿ ಬಿಜೆಪಿ ಸೇರ್ಪಡೆ (X handle)

ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿ ಗದ್ದುಗೆಯಲ್ಲಿ ಅಧಿಕಾರ ನಡೆಸುತ್ತಿರುವ ಆಮ್​​ ಆದ್ಮಿ ಪಕ್ಷ (ಆಪ್​) ಬಿಜೆಪಿ ಜೊತೆಗೆ ಬಡಿದಾಡುತ್ತಿದ್ದರೆ, ಇತ್ತ ಅದೇ ಪಕ್ಷದ ಶಾಸಕ ಮತ್ತು ಮಾಜಿ ಮಂತ್ರಿ ಅವರ ಬೆಂಬಲಿಗರು ಕೇಸರಿ ಪಡೆ ಸೇರಿಕೊಂಡು ಶಾಕ್​ ನೀಡಿದ್ದಾರೆ. ಇಬ್ಬರೂ ಮಂಗಳವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಶಾಸಕ ಕರ್ತಾರ್ ಸಿಂಗ್ ತನ್ವರ್ ಮತ್ತು ಮಾಜಿ ಸಚಿವ ರಾಜ್​ಕುಮಾರ್ ಆನಂದ್ ಅವರು ಆಪ್​ಗೆ ಗುಡ್​​ಬೈ ಹೇಳಿದವರು. ದೆಹಲಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ದಲಿತರ ಅಭಿವೃದ್ಧಿಯನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಇಬ್ಬರೂ ಆರೋಪಿಸಿದ್ದಾರೆ.

ಪಟೇಲ್ ನಗರ ಕ್ಷೇತ್ರದ ಮಾಜಿ ಶಾಸಕ ರಾಜ್​ಕುಮಾರ್​ ಆನಂದ್​, ತಮ್ಮ ಪತ್ನಿ ಮಾಜಿ ಶಾಸಕಿ ವೀಣಾ ಆನಂದ್ ಮತ್ತು ಇತರ ಕೆಲವು ಎಎಪಿ ನಾಯಕರೊಂದಿಗೆ ಬಿಜೆಪಿ ಸೇರಿದರು. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್​ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಆಪ್​ ನಾಯಕರನ್ನು ಪಕ್ಷಕ್ಕೆ ಸ್ವಾಗತಿಸಿದರು.

'ನರಕ'ದಂತಿರುವ ದೆಹಲಿ:ಬಿಜೆಪಿ ಸೇರಿದ ಬಳಿಕ ಮಾತನಾಡಿದ ಶಾಸಕ ರ್ತಾರ್ ಸಿಂಗ್ ತನ್ವರ್, ದೆಹಲಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತಿವೆ. ನೀರು, ನೈರ್ಮಲ್ಯ ಸಮಸ್ಯೆಗಳಿಂದ ರಾಷ್ಟ್ರ ರಾಜಧಾನಿಯು 'ನರಕ'ವಾಗಿ ಮಾರ್ಪಟ್ಟಿದೆ. ಸಿಎಂ ಅರವಿಂದ್​​ ಕೇಜ್ರಿವಾಲ್​​ ಅವರು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಎಡವಿದ್ದಾರೆ ಎಂದು ಟೀಕಿಸಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದಲಿತರ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದಾರೆ. ದಲಿತ ಸಮುದಾಯವು ಸಂಕಷ್ಟದಲ್ಲಿದೆ. ಜನರಿಗೆ ಸೂಕ್ತ ಸೌಕರ್ಯಗಳನ್ನು ನೀಡುವಲ್ಲಿ ಆಪ್​ ಸರ್ಕಾರ ವಿಫಲವಾಗಿದೆ ಎಂದು ಆಪ್​​ನ ಮಾಜಿ ಸಚಿವ ರಾಜ್​ಕುಮಾರ್​ ಆನಂದ್​ ದೂರಿದರು. ಆನಂದ್ ಅವರು ಕೇಜ್ರಿವಾಲ್ ಸರ್ಕಾರದಲ್ಲಿ ನಗರಾಡಳಿತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಬಕಾರಿ ಹಗರಣ ಪ್ರಕರಣದಲ್ಲಿ ದೆಹಲಿ ಸಿಎಂ ಅವರನ್ನು ಬಂಧಿಸಿದ ನಂತರ ಪಕ್ಷ ತೊರೆದಿದ್ದರು. ಜೊತೆಗೆ ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಸೇರಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದರು.

ಇಬ್ಬರು ನಾಯಕರನ್ನು ಪಕ್ಷಕ್ಕೆ ಸ್ವಾಗತಿಸಿದ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಸಚ್‌ದೇವ್​​, ದೆಹಲಿಯ ಆಡಳಿತ ಪಕ್ಷವಾಗಿ ಎಎಪಿ ಅಧಿಕಾರಾವಧಿಯು ಕೊನೆಗೊಳ್ಳುತ್ತಿದೆ. ಅದರ ಭ್ರಷ್ಟಾಚಾರ ಮತ್ತು ಹಗರಣಗಳಿಂದ ಜನರು ಬೇಸತ್ತಿದ್ದಾರೆ. ಇಬ್ಬರು ಆಪ್​ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ದೂರದೃಷ್ಟಿಯನ್ನು ಮೆಚ್ಚಿಕೊಂಡು ಪಕ್ಷ ಸೇರಿದ್ದಾರೆ. ದೆಹಲಿ ಕೆಟ್ಟ ಸ್ಥಿತಿಯಲ್ಲಿದೆ. ಭ್ರಷ್ಟಾಚಾರವನ್ನು ಕೊನೆಗಾಣಿಸುವ ಚಳವಳಿ ಮೂಲಕ ಅಸ್ತಿತ್ವಕ್ಕೆ ಬಂದ ಪಕ್ಷವೇ ಭ್ರಷ್ಟಾಚಾರ ಕೂಪದಲ್ಲಿ ಮುಳುಗಿದೆ ಆಪಾದಿಸಿದರು.

ಇದನ್ನೂ ಓದಿ:ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಭೀಕರ ರಸ್ತೆ ಅಪಘಾತ: ಹಾಲಿನ ಕಂಟೈನರ್‌ಗೆ ಬಸ್ ಡಿಕ್ಕಿ; 18 ಜನ ಸಾವು - UP Road Accident

ABOUT THE AUTHOR

...view details