ನವದೆಹಲಿ: ಲೋಕಸಭೆ ಚುನಾವಣೆಯ ಬಳಿಕ ಇದೇ ಮೊದಲ ರಾಜ್ಯ ವಿಧಾನಸಭೆ ಚುನಾವಣೆ ಎದುರಿಸಿರುವ ಹರಿಯಾಣ ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಇಂದು ಫಲಿತಾಂಶ ಹೊರಬೀಳಲಿದೆ. ಚುನಾವಣಾ ಆಯೋಗ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ರಾಜಕೀಯ ಪಕ್ಷಗಳು ಫಲಿತಾಂಶಕ್ಕಾಗಿ ತುದಿಗಾಲ ಮೇಲೆ ನಿಂತಿವೆ.
ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಮೂರು ಹಂತದ ಭದ್ರತೆ ಹಾಕಲಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಐಎನ್‌ಎಲ್‌ಡಿ-ಬಿಎಸ್‌ಪಿ, ಜೆಜೆಪಿ-ಆಜಾದ್ ಸಮಾಜ ಪಕ್ಷಗಳ ಮಧ್ಯೆ ಸ್ಪರ್ಧೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆ ಇದೆ. ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 5ರಂದು ಮತದಾನ ನಡೆದಿದ್ದು, 1,031 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶೇಕಡಾ 67.90ರಷ್ಟು ಮತದಾನವಾಗಿತ್ತು.
ಘಟಾನುಘಟಿಗಳ ಹಣೆಬರಹ ನಿರ್ಧಾರ: ಬಿಜೆಪಿ ಅಧಿಕಾರಿದಲ್ಲಿರುವ ರಾಜ್ಯದಲ್ಲಿ ಸಿಎಂ ನಯಾಬ್ ಸಿಂಗ್ ಸೈನಿ, ಕಾಂಗ್ರೆಸ್ನಿಂದ ಕುಸ್ತಿಪಟು ವಿನೇಶ್ ಫೋಗಟ್, ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ, ಜನನಾಯಕ್ ಪೀಪಲ್ಸ್ ಪಾರ್ಟಿಯ ನಾಯಕ ದುಶ್ಯಂತಸಿಂಗ್ ಚೌಟಾಲಾ ಸೇರಿದಂತೆ ಹಲವು ಘಟಾನುಘಟಿಗಳ ಭವಿಷ್ಯ ಇಂದು ಪ್ರಕಟವಾಗಲಿದೆ. ಐಎನ್‌ಎಲ್‌ಡಿ-ಬಿಎಸ್‌ಪಿ ಚುನಾವಣಾ ಪೂರ್ವ ಮೈತ್ರಿ ರಚಿಸಿಕೊಂಡಿದ್ದರೆ, ಇಂಡಿಯಾ ಕೂಟದ ಸದಸ್ಯ ಪಕ್ಷಗಳಾದ ಆಪ್ ಮತ್ತು ಕಾಂಗ್ರೆಸ್ ಮೈತ್ರಿ ಇಲ್ಲದೇ ಕಣಕ್ಕಿಳಿದಿವೆ. ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ.
2019ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ-41, ಕಾಂಗ್ರೆಸ್-28 ಮತ್ತು ಜೆಜೆಪಿ 6 ಸ್ಥಾನಗಳನ್ನು ಪಡೆದರೆ, ಹರಿಯಾಣ ಲೋಕಿತ್ ಪಕ್ಷ ಮತ್ತು ಐಎಲ್ಎನ್ಡಿ ತಲಾ 1 ಸ್ಥಾನ ಗೆದ್ದಿದ್ದವು. ಜೆಜೆಪಿ ಜೊತೆಗೂಡಿ ಬಿಜೆಪಿ ಸರ್ಕಾರ ರಚಿಸಿತ್ತು. ಆದರೆ, ಈ ವರ್ಷದ ಮಾರ್ಚ್‌ನಲ್ಲಿ ಮನೋಹರ್ ಲಾಲ್ ಖಟ್ಟರ್ ಬದಲಿಗೆ ನಯಾಬ್ ಸಿಂಗ್ ಸೈನಿ ಅವರನ್ನು ಬಿಜೆಪಿ ಸಿಎಂ ಆಗಿ ನೇಮಿಸಿದ ನಂತರ, ಜೆಜೆಪಿ ಕಮಲದಳದೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡಿತ್ತು.
ಚುನಾವಣೋತ್ತರ ಸಮೀಕ್ಷೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಭಾರೀ ಸೋಲಾಗಲಿದ್ದು, ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಕಣಿವೆ ನಾಡಿನಲ್ಲಿ ಗರಿಗೆದರಿದ ಕುತೂಹಲ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯೂ ಭಾರಿ ನಿರೀಕ್ಷೆ ಮೂಡಿಸಿದೆ. ಕಣಿವೆಯಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯ ಸ್ಥಾನಮಾನ, 370ನೇ ವಿಧಿಯನ್ನು ಮರು ಸ್ಥಾಪನೆ ವಿಷಯಗಳು ಚುನಾವಣೆಯಲ್ಲಿ ಭಾರಿ ಸದ್ದು ಮಾಡಿದ್ದವು. ವಿಶೇಷವೆಂದರೆ, ವಿಶೇಷಾಧಿಕಾರ ರದ್ದಾದ 10 ವರ್ಷಗಳ ಬಳಿಕದ ಮೊದಲ ಚುನಾವಣೆ ಇದಾಗಿದ್ದು, ಮತದಾರ ಯಾರಿಗೆ ಮಣೆ ಹಾಕಲಿದ್ದಾನೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
90 ವಿಧಾನಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 18ರಿಂದ ಮೂರು ಹಂತಗಳಲ್ಲಿ ಮತದಾನ ನಡೆದಿತ್ತು. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡರೆ, ಬಿಜೆಪಿ ಮತ್ತು ಪಿಡಿಪಿ ಏಕಾಂಗಿಯಾಗಿ ಅಖಾಡದಲ್ಲಿವೆ. ಎಕ್ಸಿಟ್ ಪೋಲ್ ಭವಿಷ್ಯದ ಪ್ರಕಾರ, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಅತಂತ್ರ ನಿರ್ಮಾಣವಾಗಲಿದೆ ಎಂದು ಊಹಿಸಲಾಗಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಮೂರು ಸ್ತರದ ಭದ್ರತೆ ಏರ್ಪಡಿಸಲಾಗಿದೆ.
ಚುನಾವಣೆಯಲ್ಲಿ 873 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶೇಕಡಾ 63.45ರಷ್ಟು ಮತದಾನವಾಗಿದೆ. 2014ರಲ್ಲಿ ಶೇ.65.52ರಷ್ಟು ಮತದಾನವಾಗಿತ್ತು. ಅಂದು ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಕಾರಣ ಬಿಜೆಪಿ ಮತ್ತು ಪಿಡಿಪಿ ಜಂಟಿಯಾಗಿ ಸರ್ಕಾರ ರಚಿದ್ದವು. ಈ ಬಾರಿಯ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿವೆ.
ಇದನ್ನೂ ಓದಿ: ಬಂಗಾಳ ವೈದ್ಯೆ ಅತ್ಯಾಚಾರ ಮಾಡಿ ಕೊಂದಿದ್ದು ಸಂಜಯ್ ರಾಯ್: ಕೋರ್ಟ್ಗೆ ಸಿಬಿಐ ಚಾರ್ಜ್ಶೀಟ್ ಸಲ್ಲಿಕೆ