ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಪಶ್ಚಿಮ ಬಂಗಾಳದ ಆರ್.ಜಿ.ಕರ್ ಕಾಲೇಜು ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಕೇಸ್ನ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಸೋಮವಾರ ಕೋಲ್ಕತ್ತಾ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತು.
ಬಂಗಾಳ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಬಂಧಿತ ಸಂಜಯ್ ರಾಯ್. ಆದರೆ, ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬುದನ್ನು ಸಿಬಿಐ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿಲ್ಲ.
ಸ್ಥಳೀಯ ಪೊಲೀಸರೊಂದಿಗೆ ನಾಗರಿಕ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ ಸಂಜಯ್ ರಾಯ್, ಆಗಸ್ಟ್ 9ರಂದು ರಾತ್ರಿ ಟ್ರೈನಿ ವೈದ್ಯೆಯ ಮೇಲೆ ದುಷ್ಕೃತ್ಯ ಎಸಗಿದ್ದಾನೆ. ವಿರಾಮದ ಸಮಯದಲ್ಲಿ ಆಕೆ ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ವಿಶ್ರಾಂತಿಗೆ ತೆರಳಿದ್ದಾಗ ಆತ ಕೃತ್ಯ ಎಸಗಿದ್ದಾನೆ ಎಂದು ಚಾರ್ಜ್ಶೀಟ್ನಲ್ಲಿ ವಿವರಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಸಂಜಯ್ ರಾಯ್ ಒಬ್ಬನೇ ಅಪರಾಧ ಎಸಗಿದ್ದಾನೆ. ಪ್ರಕರಣದಲ್ಲಿ ಕೇಳಿಬಂದ ಸಾಮೂಹಿಕ ಅತ್ಯಾಚಾರದ ಆರೋಪದ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ವೃತ್ತಾಂತ: ಕೋಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ಆಗಸ್ಟ್ 9ರಂದು ಸೆಮಿನಾರ್ ಹಾಲ್ನಲ್ಲಿ ವೈದ್ಯೆಯ ಶವವನ್ನು ಸಿಬ್ಬಂದಿಯೊಬ್ಬರು ಕಂಡಿದ್ದರು. ಬಳಿಕ ತಾಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಪೊಲೀಸ್ ತಂಡ ಬೆಳಗ್ಗೆ 10.30ರ ಸುಮಾರಿಗೆ ಆಸ್ಪತ್ರೆಗೆ ಬಂದಿತ್ತು. ತಪಾಸಣೆಯ ವೇಳೆ ವೈದ್ಯೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.
ಪರಿಶೀಲನೆ ವೇಳೆ ವೈದ್ಯೆ ಸಾವನ್ನಪ್ಪಿದ್ದರು. ಘಟನೆಯ ಬಳಿಕ ಕಾಲೇಜಿನ ವೈದ್ಯರು ಭಾರಿ ಪ್ರತಿಭಟನೆ ನಡೆಸಿದ್ದರು. ಪೊಲೀಸ್ ತನಿಖೆಯ ವೇಳೆಯೇ ಆಸ್ಪತ್ರೆಯಲ್ಲಿ ನವೀಕರಣ ಕಾರ್ಯಕ್ಕೆ ಆಡಳಿತ ಮಂಡಳಿ ಮುಂದಾಗಿತ್ತು. ಕೊಲೆ ನಡೆದ ಸೆಮಿನಾರ್ ಹಾಲ್ನ ಒಂದು ಭಾಗವನ್ನು ಕೆಡವಲಾಗಿತ್ತು. ಸಾಕ್ಷಿ ನಾಶಕ್ಕೆ ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.
ಬಂಗಾಳ ಪೊಲೀಸರು ಪ್ರಕರಣದ ಮೇಲೆ ಎಫ್ಐಆರ್ ದಾಖಲಿಸಲೂ ವಿಳಂಬ ಮಾಡಿದ್ದರು. ತೀವ್ರ ಆಕ್ಷೇಪದ ಬಳಿಕ ಕೇಸ್ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದರು. ಮಧ್ಯಪ್ರವೇಶಿಸಿದ ಕೋಲ್ಕತ್ತಾ ಹೈಕೋರ್ಟ್, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಸೆಮಿನಾರ್ ಹಾಲ್ ಪ್ರವೇಶಿಸಿದ್ದ ಸಂಜಯ್ ರಾಯ್ನನ್ನು ಬಂಧಿಸಲಾಯಿತು.
ನಂತರ ಆತನಿಗೆ ಕೋರ್ಟ್ ಆದೇಶದ ಮೇರೆಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಯಿತು. ನಾರ್ಕೋ ಟೆಸ್ಟ್ಗೆ ಒಪ್ಪಿಗೆ ನೀಡಲು ರಾಯ್ ನಿರಾಕರಿಸಿದ್ದ. ಇದರಿಂದ ಪರೀಕ್ಷೆ ನಡೆಸಲಾಗಲಿಲ್ಲ. ಘಟನೆಯಲ್ಲಿ ಆರೋಪಿತರಾಗಿರುವ ಪೊಲೀಸ್ ಠಾಣಾಧಿಕಾರಿ ಅಭಿಜಿತ್ ಮೊಂಡಲ್ ಮತ್ತು ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಸಿಬಿಐ ಬಂಧಿಸಿತ್ತು.
ವೈದ್ಯೆಯ ವಿರುದ್ಧ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಿದರು. ವೈದ್ಯರಿಗೆ ಭದ್ರತೆ ನೀಡಬೇಕು ಎಂದು ಕೋರಿ ಈಗಲೂ ಆರ್.ಜಿ.ಕರ್ ಕಾಲೇಜು ವೈದ್ಯರು ನಿರಶನ ಮುಂದುವರಿಸಿದ್ದಾರೆ.
ಇದನ್ನೂ ಓದಿ: ರತನ್ ಟಾಟಾ ಆರೋಗ್ಯದಲ್ಲಿ ಏರುಪೇರು ವದಂತಿ: ಹಿರಿಯ ಉದ್ಯಮಿ ಸ್ಪಷ್ಟನೆ ಹೀಗಿದೆ