ಇಂದೋರ್ (ಮಧ್ಯಪ್ರದೇಶ):ಇಂದೋರ್ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣದ ಬಳಿ ಇಬ್ಬರು ಯುವ ಸೇನಾ ಅಧಿಕಾರಿಗಳ ಮೇಲೆ ದಾಳಿ ಮಾಡಿದ ಡಕಾಯಿತರ ಗುಂಪೊಂದು, ಇಬ್ಬರು ಸ್ನೇಹಿತೆಯರ ಪೈಕಿ ಒಬ್ಬರ ಮೇಲೆ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಗುರುವಾರ ಬಂಧಿಸಲಾಗಿದೆ. ಇನ್ನೂ ನಾಲ್ವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊವ್ ಮಿಲಿಟರಿ ಕಂಟೋನ್ಮೆಂಟ್‌ನಿಂದ 30 ಕಿಮೀ ದೂರದಲ್ಲಿರುವ ಜಾಮ್ ಗೇಟ್ ಬಳಿ ಮಂಗಳವಾರ ತಡರಾತ್ರಿ ಘಟನೆ ನಡೆದಿದೆ. ಆರು ಆರೋಪಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಗುರುತಿಸಲಾಗಿದೆ. ಅವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹಿತಿಕಾ ವಾಸಲ್ ತಿಳಿಸಿದ್ದಾರೆ.
ಘಟನೆಯ ವಿವರ:ವಿಂಧ್ಯಾಚಲ ಪರ್ವತ ಶ್ರೇಣಿಗಳಿಂದ ಕೂಡಿರುವ ಜಾಮ್ ಗೇಟ್ ಸುತ್ತಲೂ ದೊಡ್ಡ ಕಾಡು ಇದೆ. ಇಲ್ಲಿ ಇಬ್ಬರು ಯುವ ಸೇನಾ ಅಧಿಕಾರಿಗಳು ತಮ್ಮ ಇಬ್ಬರು ಸ್ನೇಹಿತೆಯರ ಜೊತೆಗೆ ಪಿಕ್ನಿಕ್ಗೆ ತೆರಳಿದ್ದರು. ಈ ವೇಳೆ ಆರು ಜನ ಆರೋಪಿಗಳು ದಾಳಿ ಮಾಡಿದ್ದಾರೆ. ಒಬ್ಬ ಸೇನಾಧಿಕಾರಿ, ಆತನ ಸ್ನೇಹಿತೆಯನ್ನು ಒತ್ತೆಯಾಳಾಗಿಟ್ಟುಕೊಂಡು, ಇನ್ನಿಬ್ಬರಿಗೆ 10 ಲಕ್ಷ ರೂಪಾಯಿ ತರಲು ಬೇಡಿಕೆ ಇಟ್ಟಿದ್ದಾರೆ. ಇಬ್ಬರು ಹಣಕ್ಕಾಗಿ ಕ್ಯಾಂಪ್ ಕಡೆಗೆ ತೆರಳಿದ್ದಾರೆ.
ಇತ್ತ, ಒತ್ತೆಯಾಳಾಗಿಟ್ಟುಕೊಂಡಿದ್ದ ಸೇನಾಧಿಕಾರಿಯ ಸ್ನೇಹಿತೆಯನ್ನು ಅಲ್ಲಿಂದ ಎಳೆದೊಯ್ದ ದಾಳಿಕೋರರು, ಆಕೆಯ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಹಣಕ್ಕಾಗಿ ಬಂದಿದ್ದ ಸೇನಾಧಿಕಾರಿ ಮತ್ತು ಸ್ನೇಹಿತೆ ಘಟನೆಯ ಬಗ್ಗೆ ಹಿರಿಯ ಸೇನಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಸ್ಥಳಕ್ಕೆ ತೆರಳಿದ್ದಾರೆ. ಸೇನಾಧಿಕಾರಿಗಳು ಬಂದಿದ್ದನ್ನು ಕಂಡ ದಾಳಿಕೋರರು ಇಬ್ಬರನ್ನು ಸ್ಥಳದಲ್ಲೇ ಬಿಟ್ಟು ಕಾಡಿನಲ್ಲಿ ಪರಾರಿಯಾಗಿದ್ದಾರೆ.
ಆರೋಪಿಗಳ ಮೇಲಿವೆ ಕೇಸ್ಗಳು:ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಹಲ್ಲೆ, ದರೋಡೆ ಮತ್ತು ಅತ್ಯಾಚಾರ ಆರೋಪಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ. ಎಲ್ಲ ಆರೋಪಿಗಳು ಸಮೀಪದ ಗ್ರಾಮಗಳ ನಿವಾಸಿಗಳಾಗಿದ್ದು, ಅವರಲ್ಲಿ ಇಬ್ಬರು ಅಪರಾಧ ದಾಖಲೆಗಳನ್ನು ಹೊಂದಿದ್ದಾರೆ. ಶಂಕಿತ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವ ಸೇನಾಧಿಕಾರಿ ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪವಿದೆ. ಈ ಬಗ್ಗೆ ಯುವತಿಯಿಂದ ಹೇಳಿಕೆ ಪಡೆದಿಲ್ಲ. ಆಕೆ ಆಘಾತಕ್ಕೊಳಗಾಗಿದ್ದಾರೆ. ಯಾವುದೇ ಹೇಳಿಕೆ ನೀಡಿಲ್ಲ. ಆರೋಪಿಗಳು ನಾಲ್ವರ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದರು. ಬಳಿಕ ತಮ್ಮನ್ನು ಅವುಗಳಿಂದ ಪತ್ತೆ ಹಚ್ಚುವ ಭಯದಲ್ಲಿ ಹಿಂದಿರುಗಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಭಲೇ ನಾರಿ; ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯನ ಖಾಸಗಿ ಅಂಗ ಕತ್ತರಿಸಿದ ನರ್ಸ್ - NURSE CUTS PRIVATE PART