ನವದೆಹಲಿ :ಫೆಬ್ರವರಿವರೆಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿ ಕೇಂದ್ರ ಸರ್ಕಾರವು 96.55 ರಷ್ಟು ಕ್ಲೈಮ್‌ಗಳನ್ನು ಇತ್ಯರ್ಥಪಡಿಸಿದೆ. ಇದರ ಮೊತ್ತ 2,610 ಕೋಟಿ ರೂಪಾಯಿ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2015ರಲ್ಲಿ ಪ್ರಾರಂಭವಾದಾಗಿನಿಂದ ಈ ಯೋಜನೆಯಡಿ 1.73 ಲಕ್ಷ ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಪಘಾತದಿಂದ ಸಂಭವಿಸುವ ಸಾವು ಅಥವಾ ಅಂಗವೈಕಲ್ಯಕ್ಕೆ ವಿಮಾ ರಕ್ಷಣೆ ನೀಡುವ ಯೋಜನೆಯಾಗಿದೆ. ಈ ಯೋಜನೆಯಡಿ ಇದುವರೆಗೆ 43.29 ಕೋಟಿ ಜನರಿಗೆ ವಿಮೆ ಮಾಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಫೆಬ್ರವರಿ 29, 2024ರ ಹೊತ್ತಿಗೆ, 1.73 ಲಕ್ಷ ಜೋಡಿಗಳಿಗೆ 2610 ಕೋಟಿ ರೂ.ಗಳ ಕ್ಲೈಮ್ ನೀಡಲಾಗಿದೆ. ಕ್ಲೈಮ್ ಇತ್ಯರ್ಥ ಅನುಪಾತವು ಶೇಕಡಾ 96.55 ರಷ್ಟಿದೆ". ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಮೇ 9, 2015 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಜನರಿಗೆ ಕೈಗೆಟುಕುವ ವಿಮಾ ಯೋಜನೆ ಒದಗಿಸಲು ಈ ಯೋಜನೆ ಉದ್ದೇಶಿಸಿದೆ ಎಂದು ತಿಳಿಸಿದರು.