ಶ್ರೀನಗರ:ದಶಕದ ಬಳಿಕ ನಡೆದಿದ್ದ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿ ನಿಚ್ಚಳ ಬಹುಮತ ಪಡೆದು ಅಧಿಕಾರ ರಚನೆಗೆ ಸಜ್ಜಾಗಿದೆ. ಒಮರ್ ಅಬ್ದುಲ್ಲಾ ಅವರು ನೂತನ ಸಿಎಂ ಆಗಿ ಪ್ರಮಾಣ ಪಡೆಯುವ ಸಾಧ್ಯತೆ ಇದೆ. ಈ ಮಧ್ಯೆ ಶಾಸನಸಭೆಗೆ ಚುನಾಯಿತರಾದ ನೂತನ ಶಾಸಕರಲ್ಲಿ ಶೇಕಡಾ 84ರಷ್ಟು ಮಂದಿ ಕೋಟಿ ಕುಳಗಳು ಎಂಬ ಅಂಶ ಬೆಳಕಿಗೆ ಬಂದಿದೆ.
ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಹೊಸದಾಗಿ ಚುನಾಯಿತರಾದ ಶಾಸಕರಲ್ಲಿ 84 ಪ್ರತಿಶತ ಶಾಸಕರು ಕೋಟ್ಯಧಿಪತಿಗಳಿದ್ದಾರೆ. ಇದು 2014ಕ್ಕೆ ಹೋಲಿಸಿದರೆ, ಶೇಕಡಾ 9ರಷ್ಟು ಹೆಚ್ಚು. ಇವರ ಸರಾಸರಿ ಘೋಷಿತ ಆಸ್ತಿಯೇ 11.43 ಕೋಟಿ ರೂಪಾಯಿ ಆಗಿದೆ ಎಂದು ತಿಳಿಸಿದೆ.
ದಶಕದ ಹಿಂದೆ ಕಣಿವೆನಾಡಿನ ಶಾಸಕರ ಸರಾಸರಿ ಘೋಷಿತ ಆಸ್ತಿ 4.56 ಕೋಟಿ ರೂಪಾಯಿಗಳಿತ್ತು. ಈಗ ಅದು 11 ಕೋಟಿಗೆ ಏರಿಕೆಯಾಗಿದೆ. ಅಂದರೆ, ಆಸ್ತಿಯು ದ್ವಿಗುಣಗೊಂಡಿದೆ ಎಂದು ಅಂಕಿಅಂಶಗಳು ಸಾರಿವೆ.
ಬಿಜೆಪಿ, ಕಾಂಗ್ರೆಸ್ ಶಾಸಕರು ಶತಕೋಟ್ಯಧಿಪತಿಗಳು:ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾಯಿತರಾಗಿರುವ ಕಾಂಗ್ರೆಸ್ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಮತ್ತು ಬಿಜೆಪಿ ನಾಯಕ ದೇವೆಂದರ್ ರಾಣಾ ಅವರು 100 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿರುವ ಶ್ರೀಮಂತ ಶಾಸಕರಾಗಿದ್ದಾರೆ.
ತಾರಿಕ್ ಹಮೀದ್ ಅವರು ಚುನಾವಣೆಗೂ ಮೊದಲು ನಾಮಪತ್ರದಲ್ಲಿ ನಮೂದಿಸಿದಂತೆ 148 ಕೋಟಿ ಆಸ್ತಿ ಹೊಂದಿ ಕೇಂದ್ರಾಡಳಿತ ಪ್ರದೇಶದಲ್ಲಿಯೇ ಅತಿ ಶ್ರೀಮಂತ ಜನಪ್ರತಿನಿಧಿಯಾಗಿದ್ದಾರೆ. ಬಳಿಕ ನಗ್ರೋಟಾ ಕ್ಷೇತ್ರದಿಂದ ಗೆದ್ದಿರುವ ಬಿಜೆಪಿ ನಾಯಕ ದೇವೇಂದ್ರ ರಾಣಾ 126 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಉದ್ಯಮಿ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ (NC) ಶಾಸಕ ಮುಷ್ತಾಕ್ ಅಹ್ಮದ್ ಗುರು 94 ಕೋಟಿ ಮೌಲ್ಯದ ಆಸ್ತಿಯೊಂದಿಗೆ ಮೂರನೇ ಶ್ರೀಮಂತರಾಗಿದ್ದಾರೆ.
ಬಡ ಶಾಸಕರು:ಚೊಚ್ಚಲ ಬಾರಿಗೆ ಜಮ್ಮು- ಕಾಶ್ಮೀರದಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಖಾತೆ ತೆರೆಯಲು ಕಾರಣವಾದ ಮೆಹರಾಜ್ ಮಲಿಕ್ ಅವರು ಚುನಾಯಿತ ಶಾಸಕರಲ್ಲಿಯೇ ಅತ್ಯಂತ ಬಡವರಾಗಿದ್ದಾರೆ. ಇವರು ಕೇವಲ 29,070 ರೂ ಆಸ್ತಿ ಹೊಂದಿದ್ದಾರೆ. ಜೊತೆಗೆ, ಕರ್ನಾಹ್‌ನ ಎನ್‌ಸಿಯ ಜಾವೈದ್ ಅಹ್ಮದ್ ಮಿರ್ಚಾಲ್ 3 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ಎರಡನೇ ಬಡ ಶಾಸಕರಾಗಿದ್ದಾರೆ.
ಪಕ್ಷವಾರು ಸಿರಿವಂತಿಕೆ:ನ್ಯಾಷನಲ್ ಕಾನ್ಫ್ರೆನ್ಸ್ನ 37 ಶಾಸಕರು (ಶೇಕಡಾ 88) ಕೋಟ್ಯಧಿಪತಿಗಳಾಗಿದ್ದರೆ, ಬಿಜೆಪಿಯ 29 ರ ಪೈಕಿ 25 ಮಂದಿ (ಶೇ.86 ರಷ್ಟು) ಕೋಟಿ ಕುಳಗಳಾಗಿದ್ದಾರೆ. ಎಲ್ಲಾ ಆರು ಕಾಂಗ್ರೆಸ್ ಶಾಸಕರು ಮತ್ತು ಸಿಪಿಐ(ಎಂ) ಮತ್ತು ಪೀಪಲ್ಸ್ ಕಾನ್ಫರೆನ್ಸ್‌ನ ಏಕೈಕ ಶಾಸಕ 1 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದಾರೆ.
ಹೊಸದಾಗಿ ಚುನಾಯಿತರಾದ 90 ಶಾಸಕರ ಪೈಕಿ 76 ಮಂದಿ ಕನಿಷ್ಠ 1 ಕೋಟಿ ರೂಪಾಯಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದರೆ, 2014ರಲ್ಲಿ ಆಯ್ಕೆಯಾದ 87 ಶಾಸಕರಲ್ಲಿ 65 ಮಂದಿ ಮಾತ್ರ ಕೋಟ್ಯಧಿಪತಿಗಳಾಗಿದ್ದರು.
ಇದನ್ನೂ ಓದಿ:ಎನ್ಸಿ ಶಾಸಕಾಂಗ ಪಕ್ಷದ ನಾಯಕರಾಗಿ ಒಮರ್ ಅಬ್ದುಲ್ಲಾ ಆಯ್ಕೆ; ಸಿಎಂ ಆಗಿ 'ಆ ದಿನ' ಪ್ರಮಾಣ