ಕರ್ನಾಟಕ

karnataka

ETV Bharat / bharat

ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ; 10 ಮಂದಿ ಸಾವು

ವಿರುಧುನಗರ ಜಿಲ್ಲೆಯ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ.

ಖಾಸಗಿ ಪಟಾಕಿ ಕಾರ್ಖಾನೆ
ಖಾಸಗಿ ಪಟಾಕಿ ಕಾರ್ಖಾನೆ

By ETV Bharat Karnataka Team

Published : Feb 17, 2024, 2:14 PM IST

Updated : Feb 17, 2024, 5:26 PM IST

ವಿರುಧುನಗರ (ತಮಿಳುನಾಡು): ಪಟಾಕಿ ಸ್ಫೋಟಗೊಂಡ ಪರಿಣಾಮ ಐವರು ಮಹಿಳೆಯರು ಸೇರಿದಂತೆ 10 ಜನರು ಮೃತಪಟ್ಟ ದಾರುಣ ಘಟನೆ ವಿರುಧುನಗರ ಜಿಲ್ಲೆಯ ವೆಂಬಕೊಟ್ಟೈ ಬಳಿಯ ರಾಮು ದೇವನಪಟ್ಟಿಯಲ್ಲಿರುವ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಔಷಧಿ ಮಿಶ್ರಣದಲ್ಲಿ ಘರ್ಷಣೆ ಉಂಟಾಗಿ ಈ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ವಿಜಯ್ ಎಂಬುವರ ಒಡೆತನದ ಪಟಾಕಿ ಕಾರ್ಖಾನೆ ಇದಾಗಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.

ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಶಿವಕಾಶಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಅಪಘಾತದ ಸ್ಥಳದಲ್ಲಿ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿದೆ. ಎಂದಿನಂತೆ ಇಂದು ಸಹ ಕಾರ್ಖಾನೆಗೆ ಆಗಮಿಸಿದ್ದ ಕಾರ್ಮಿಕರು, ತಮ್ಮ ತಮ್ಮ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಔಷಧಿ ಮಿಶ್ರಣದಲ್ಲಿ ಘರ್ಷಣೆ ಉಂಟಾಗಿ ಏಕಾಏಕಿ ಸ್ಫೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಪಟಾಕಿ ಕಾರ್ಖಾನೆಯ ಜೊತೆಗೆ ನಾಲ್ಕು ಕಟ್ಟಡಗಳು ಸಹ ನಾಶವಾಗಿವೆ. ಘಟನೆ ಬಳಿಕ ಸ್ಥಳದಿಂದ ಹಲವರು ಓಡಿ ಹೋಗುತ್ತಿರುವುದು ಕಂಡು ಬಂದಿದೆ. ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಏಳು ಜನರು ಸ್ಥಳದಲ್ಲೇ ಮೃತಪಟ್ಟರೆ, ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಸುದ್ದಿ ತಿಳಿದು ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸಾಮಿ ಮತ್ತು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಸಾಮಾಜಿ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

ಕಳೆದ ವರ್ಷ 11 ಮಂದಿ ಪ್ರಾಣ ಕಳೆದುಕೊಂಡಿದ್ದರು: ಕಳೆದ ವರ್ಷವೂ ಇದೇ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿತ್ತು. ಅಕ್ಟೋಬರ್ ತಿಂಗಳಿನಲ್ಲಿ ವಿರುದುನಗರ ಜಿಲ್ಲೆಯ ರಂಗಪಾಳ್ಯಂ ಮತ್ತು ಕಿಚಿನ್ಯಕನಪಟ್ಟಿಯಲ್ಲಿ ಎರಡು ಪ್ರತ್ಯೇಕ ಪಟಾಕಿ ಕಾರ್ಖಾನೆಗಳಲ್ಲಿ ಸ್ಫೋಟ ಸಂಭವಿಸಿತ್ತು. ಇದರಲ್ಲಿ 11 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮೃತರ ಕುಟುಂಬಕ್ಕೆ ಸಾಂತ್ವನ ಸಹ ತಿಳಿಸಿದ್ದರು. ಅಲ್ಲದೇ ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಹಾಗೂ ಗಂಭೀರವಾಗಿ ಗಾಯಗೊಂಡವರ ಚಿಕಿತ್ಸೆಗೆ ತಲಾ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ:ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: 50ಕ್ಕೂ ಹೆಚ್ಚು ಮನೆಗಳು ಭಸ್ಮ, ಏಳು ಜನ ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ

Last Updated : Feb 17, 2024, 5:26 PM IST

ABOUT THE AUTHOR

...view details