ಕರ್ನಾಟಕ

karnataka

ETV Bharat / bharat

ಮಧ್ಯ ಪ್ರದೇಶ: ರತಪಾನಿ ಅರಣ್ಯ ಪ್ರದೇಶ ದೇಶದ 57ನೇ ಹುಲಿ ಸಂರಕ್ಷಣಾ ವಲಯವಾಗಿ ಘೋಷಣೆ

ಮಾಧವ್ ​ನ್ಯಾಷನಲ್​ ಪಾರ್ಕ್ ​ಅನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಉದ್ಯಾನದ ಬದಲಿಗೆ ರತಪಾನಿ ಅರಣ್ಯ ಪ್ರದೇಶವನ್ನು ರಾಜ್ಯದ 8ನೇ ಮತ್ತು ದೇಶದ 57ನೇ ರಾಷ್ಟ್ರೀಯ ಹುಲಿ ಸಂರಕ್ಷಣಾ ತಾಣವಾಗಿ ಘೋಷಿಸಲಾಗಿದೆ.

ಹುಲಿ ಸಂರಕ್ಷಣಾ ವಲಯ
ಹುಲಿ ಸಂರಕ್ಷಣಾ ವಲಯ (ETV Bharat)

By ETV Bharat Karnataka Team

Published : Dec 3, 2024, 3:56 PM IST

ಭೋಪಾಲ್(ಮಧ್ಯ ಪ್ರದೇಶ):ಅತೀ ಹೆಚ್ಚು ವ್ಯಾಘ್ರಗಳನ್ನು ಹೊಂದಿರುವ ಮಧ್ಯ ಪ್ರದೇಶದಲ್ಲಿ 8ನೇ ಮತ್ತು ದೇಶದ 57ನೇ ಹುಲಿ ಸಂರಕ್ಷಿತ ತಾಣವನ್ನು ಘೋಷಿಸಲಾಗಿದೆ. ರೈಸನ್​ ಮತ್ತು ರಾಜಧಾನಿ ಭೋಪಾಲ್​ ಜಿಲ್ಲೆಗಳಿಗೆ ಹೊಂದಿಕೊಂಡಿರುವ ರತಪಾನಿ ಅರಣ್ಯ ಪ್ರದೇಶವನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ವಲಯ ಎಂದು ಅಲ್ಲಿನ ಸರ್ಕಾರ ಮಂಗಳವಾರ ಪ್ರಕಟಿಸಿತು.

ರತಪಾನಿ ಹುಲಿ ಸಂರಕ್ಷಿತ ಪ್ರದೇಶದ ಗಡಿಯು ಭೋಪಾಲ್‌ನಿಂದ ಕೇವಲ 15 ಕಿಲೋ ಮೀಟರ್ ದೂರದಲ್ಲಿದೆ. ಭೋಪಾಲ್, ರೈಸೆನ್ ಮತ್ತು ಸೆಹೋರ್ 3 ಜಿಲ್ಲೆಗಳಿಗೆ ಚಾಚಿಕೊಂಡಿದೆ. ಈ ಅರಣ್ಯವು ಒಟ್ಟು 1271.456 ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿದೆ. ಅದರಲ್ಲಿ 763.812 ಕಿ.ಮೀ ಕೋರ್​ ವಲಯ ಮತ್ತು 507.653 ಕಿ.ಮೀ ಬಫರ್​ ವಲಯ ಎಂದು ಗುರುತಿಸಲಾಗಿದೆ. ಇದರ ವ್ಯಾಪ್ತಿಗೆ 9 ಗ್ರಾಮಗಳು ಬರುತ್ತವೆ.

ರತಪಾನಿ ಅರಣ್ಯದಲ್ಲಿ ಎಷ್ಟು ಹುಲಿಗಳಿವೆ?:2022ರ ಹುಲಿ ಗಣತಿಯ ಪ್ರಕಾರ, ರತಪಾನಿಯಲ್ಲಿ 56 ಹುಲಿಗಳಿವೆ ಎಂದು ಹೇಳಲಾಗಿದೆ. ಆದಾಗ್ಯೂ, ಪಗ್‌ಮಾರ್ಕ್‌ಗಳು ಮತ್ತು ಇತರ ಚಿಹ್ನೆಗಳ ಆಧಾರದ ಮೇಲೆ ಈ ಅರಣ್ಯದಲ್ಲಿ 70 ಕ್ಕೂ ಹೆಚ್ಚು ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಇದರೊಳಗೆ ವಿಶ್ವ ಪರಂಪರೆಯ ತಾಣವಾದ ಭೀಮ್ ಬೆಟ್ಕಾ ಕೂಡ ಇದೆ. ನರ್ಮದಾ ನದಿಯ ಆಮ್ಲಾ ಘಾಟ್ ಮತ್ತು ಸಲ್ಕಾನ್‌ಪುರ್ ದೇವಾಲಯವೂ ಈ ಪ್ರದೇಶದಲ್ಲಿದೆ.

ಮಧ್ಯ ಪ್ರದೇಶದಲ್ಲಿ ಈಗಾಗಲೇ ಕನ್ಹಾ, ಸತ್ಪುರ್​, ಬಂಢಾವಗಢ್​​, ಪೆಂಚ್​, ಸಂಜಯ್​ ದುಬ್ರಿ, ಪನ್ನಾ ಮತ್ತು ವೀರಂಗನ ದುರ್ಗಾವತಿ ಎಂಬ ಎಂಟು ಹುಲಿ ಸಂರಕ್ಷಿತ ತಾಣಗಳಿವೆ.

10 ಅಡಿ ಎತ್ತರದ ಬೇಲಿ ನಿರ್ಮಾಣ:ರಾಜಧಾನಿ ಭೋಪಾಲ್‌ಗೆ ರತಪಾನಿ ಅರಣ್ಯ ಪ್ರದೇಶವು ಸುಮಾರು 100 ಕಿಲೋ ಮೀಟರ್ ಗಡಿಯನ್ನು ಹಂಚಿಕೊಂಡಿದೆ. ರತಪಾನಿಯಿಂದ ಭೋಪಾಲ್‌ನ ಕಲಿಯಾಸೋಟ್ ಮತ್ತು ನೀಲ್ಬರ್ಹ್ ಪ್ರದೇಶಗಳಿಗೆ ಸಾಕಷ್ಟು ಹುಲಿಗಳ ಸಂಚಾರ ಕಂಡುಬಂದಿದೆ. ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಗಡಿಯಲ್ಲಿ 10 ಅಡಿ ಎತ್ತರದ ಬೇಲಿ ಅಳವಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಎನ್‌ಟಿಸಿಎ ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ 'ಟೈಗರ್ಸ್ ಸ್ಟೇಟಸ್: ಕೋ-ಪ್ರೆಡೇಟರ್ಸ್ & ಪ್ರೇ ಇನ್ ಇಂಡಿಯಾ-2022' ವರದಿಯ ಪ್ರಕಾರ, ಮಧ್ಯಪ್ರದೇಶದಲ್ಲಿ 785 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಇದು ದೇಶದಲ್ಲೇ ಅತೀ ಹೆಚ್ಚು. ಬಳಿಕ ಕರ್ನಾಟಕದಲ್ಲಿ 563 ಮತ್ತು ಉತ್ತರಾಖಂಡದಲ್ಲಿ 560 ಹುಲಿಗಳಿವೆ ಎಂದು ವರದಿ ಹೇಳಿದೆ.

ಇದನ್ನೂ ಓದಿ:3 ಹೊಸ ಕ್ರಿಮಿನಲ್ ಕಾನೂನುಗಳ ಲೋಕಾರ್ಪಣೆ ಕಾರ್ಯಕ್ರಮ ಇಂದು: ಪ್ರಧಾನಿ ಮೋದಿ ಭಾಗಿ

ABOUT THE AUTHOR

...view details