ಹೈದರಾಬಾದ್: ನಗರದಲ್ಲಿ ಪ್ರತಿ ವರ್ಷ 400 POCSO (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣಗಳು ವರದಿಯಾಗುತ್ತಿವೆ. ಆತಂಕಕಾರಿ ವಿಷಯ ಎಂದರೆ ಅದರಲ್ಲಿ 80 ಶೇಕಡಾದಷ್ಟು ಪ್ರಕರಣಗಳು, ಪ್ರೀತಿಯ ಹೆಸರಿನಲ್ಲಿ ಮೋಸಗೊಳಿಸಿರುವುದಾಗಿದೆ. ಈ ವರ್ಷವೊಂದರಲ್ಲೇ ಎಂಟು ತಿಂಗಳ ಅವಧಿಯಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅವರಲ್ಲಿ 279 ಬಲಿಪಶುಗಳು, ಸ್ನೇಹಿತರು ಅಥವಾ ಪ್ರೇಮಿಗಳೆಂದು ನಂಬಿದ ಜನರಿಂದಲೇ ಆಮಿಷಕ್ಕೆ ಒಳಗಾದವರು. ಈ ಸಂಖ್ಯೆಗಳೇ ಸಮಸ್ಯೆಯ ಗಂಭೀರತೆ ಒತ್ತಿ ಹೇಳುತ್ತದೆ.
ದಿನಕ್ಕೆ ಒಂದೆರಡರಂತೆ ಕೇಸ್ಗಳು ದಾಖಲು:ಹೈದರಾಬಾದ್‌ನ 71 ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು ಪ್ರತಿದಿನ ಸರಾಸರಿ 1-2 ದೂರುಗಳನ್ನು ವರದಿ ಮಾಡುತ್ತಾರೆ. ಅಂತಹ ಒಂದು ಪ್ರಕರಣದಲ್ಲಿ 16 ವರ್ಷದ ವಿದ್ಯಾರ್ಥಿನಿಯೊಬ್ಬಳು 35 ವರ್ಷದ ಆಟೋ ಚಾಲಕನನ್ನು ಪ್ರೀತಿಸುತ್ತಿದ್ದಳು. ಕೊನೆಗೆ ಅವನ ಜೊತೆಗಿರಲು ಆಕೆ ಮನೆಯನ್ನೂ ತೊರೆದಿದ್ದಳು. ತನ್ನನ್ನು ಆತ ವೇಶ್ಯಾವಾಟಿಕೆ ರಿಂಗ್‌ಗೆ ಮಾರಾಟ ಮಾಡಲು ಉದ್ದೇಶಿಸಿರುವುದನ್ನು ಅರಿತ ಬಾಲಕಿ, ಅದೃಷ್ಟವಶಾತ್, ಆತನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು. ಆ ವ್ಯಕ್ತಿ ಇತರ ಮೂವರು ಹುಡುಗಿಯರನ್ನು ಇದೇ ರೀತಿ ವಂಚಿಸಿದ್ದ ಎಂದು ತನಿಖೆಯ ನಂತರ ತಿಳಿದು ಬಂದಿದೆ.
ಮತ್ತೊಂದು ಪ್ರಕರಣದಲ್ಲಿ ಉತ್ತಮ ಕುಟುಂಬದ 15 ವರ್ಷದ ಬಾಲಕಿಯೊಬ್ಬಳು ಸಮಾಲೋಚನೆ ಮಾಡಿದರೂ, ಪದೇ ಪದೇ ವಿವಿಧ ಪುರುಷರ ಜೊತೆ ಪ್ರೀತಿಗೆ ಬಿದ್ದಿದ್ದಳು. ಪ್ರತಿ ಬಾರಿಯೂ ಹೆತ್ತವರು ಅವಳನ್ನು ಮನವೊಲಿಸಿ ಮನೆಗೆ ಮರಳಿ ಕರೆತರಬೇಕಾಗಿತ್ತು. ಯುವತಿಗೆ ಮಾರ್ಗದರ್ಶನ ನೀಡುವಲ್ಲಿ ಕೌನ್ಸೆಲಿಂಗ್ ಕೂಡ ವಿಫಲವಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದರು.