ಜಲ್ನಾ (ಮಹಾರಾಷ್ಟ್ರ):ಸೇತುವೆ ನಿರ್ಮಾಣ ಕಾಮಗಾರಿಗೆ ಬಂದಿದ್ದ ಕಾರ್ಮಿಕರು ಮಲಗಿದ್ದ ಶೆಡ್ ಮೇಲೆ ಟಿಪ್ಪರ್ ಲಾರಿಯೊಂದು ಮರಳು ಸುರಿದ ಪರಿಣಾಮ 17 ವರ್ಷದ ಬಾಲಕ ಸೇರಿದಂತೆ ಐವರು ಕಾರ್ಮಿಕರು ಮರಳಿನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಜಲ್ನಾ ಜಿಲ್ಲೆಯ ಪಸೋಡಿ ಶಿವರಾತ್ನಲ್ಲಿ ನಡೆದಿದೆ. ಶನಿವಾರ ಬೆಳಗಿನ ಜಾವ 3.30ಕ್ಕೆ ಜಾಫ್ರಾಬಾದ್ ತಾಲೂಕಿನ ಪಸೋಡಿ- ಚಂದೋಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಫ್ರಾಬಾದ್ ತಾಲೂಕಿನ ಪಸೋಡಿ ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಕಾರ್ಮಿಕರು ಬಂದಿದ್ದರು. ಸೇತುವೆ ನಿರ್ಮಾಣ ಸ್ಥಳದ ಬಳಿಯ ಶೀಟ್ ಮೆಟಲ್ ಶೆಡ್ನಲ್ಲಿ ಕಾರ್ಮಿಕರು ಮಲಗಿದ್ದರು.
ಬೆಳಗಿನ ಜಾವ ಸುಮಾರು 3.30ರ ಸುಮಾರಿಗೆ ಮರಳು ಹೊತ್ತು ಬಂದ ಟಿಪ್ಪರ್ ಚಾಲಕ ಶೆಡ್ ಮೇಲೆ ಮರಳು ಸುರಿದಿದ್ದಾನೆ. ಪರಿಣಾಮ ಶೆಡ್ನಲ್ಲಿ ಮಲಗಿದ್ದ 6 ಮಂದಿ ಮರಳಿನೊಳಗೆ ಸಿಲುಕಿಕೊಂಡಿದ್ದಾರೆ. ಶೆಡ್ನ ಮುಂಭಾಗದಲ್ಲಿ ಮಲಗಿದ್ದ ಮಹಿಳೆಯೊಬ್ಬರು ಅದನ್ನು ಗಮನಿಸಿ ಕಿರುಚಿಕೊಂಡಿದ್ದಾರೆ. ಇದನ್ನು ಕಂಡ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಮಹಿಳೆ ಹತ್ತಿರದ ದನದ ಕೊಟ್ಟಿಗೆಗೆ ಹೋಗಿ ರೈತರನ್ನು ಕರೆದು, ಅವರು ಮರಳನ್ನು ತೆಗೆದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ 6 ಮಂದಿಯಲ್ಲಿ 5 ಮಂದಿ ಜೀವಂತ ಸಮಾಧಿಯಾಗಿದ್ದು, 12 ವರ್ಷದ ಬಾಲಕಿಯೊಬ್ಬಳನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶೆಡ್ನಲ್ಲಿ ಕಾರ್ಮಿಕರು ಮಲಗಿರುವ ಬಗ್ಗೆ ಟಿಪ್ಪರ್ ಚಾಲಕನಿಗೆ ತಿಳಿದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.