ಗಾಜಿಯಾಬಾದ್/ನವದೆಹಲಿ: ಎರಡು ಅಂತಸ್ತಿನ ಮನೆಯೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ಒಂದೇ ಕುಟುಂಬದ ಐವರು ಸಜೀವ ದಹನವಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿವೆ. ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಾಹಿತಿ ಬಂದ ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ.
ಗಾಜಿಯಾಬಾದ್‌ನ ಲೋನಿ ಬಾರ್ಡರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬುಧವಾರ ರಾತ್ರಿ ಬಹ್ತಾ ಹಾಜಿಪುರದ ಎರಡು ಅಂತಸ್ತಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ಲಭಿಸಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನ ಆರಂಭಿಸಿದವು.
ನೆಲಮಹಡಿಯಿಂದ ಮೇಲಿನ ಮಹಡಿಗಳಿಗೂ ಬೆಂಕಿ ವ್ಯಾಪಿಸಿದ್ದು, ನಂದಿಸಲು ಸಾಕಷ್ಟು ಪ್ರಯತ್ನ ಪಡಬೇಕಾಯಿತು. ಅಗ್ನಿಶಾಮಕ ದಳದವರು ಮೇಲಿನ ಮಹಡಿಗೆ ಹೋದಾಗ ಅಲ್ಲಿ ಐವರು ಸಜೀವ ದಹನವಾಗಿದ್ದು ಕಂಡು ಬಂತು. ಈ ನಡುವೆ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ಸೇರಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ತಿಳಿಸಿದ್ದಾರೆ. 7 ತಿಂಗಳ ಮಗು ಮತ್ತು ಎಂಟು ವರ್ಷದ ಮಗು ಸಹ ಘಟನೆಯಲ್ಲಿ ಮೃತಪಟ್ಟಿವೆ. ಸತ್ತವರಲ್ಲಿ ಇಬ್ಬರು ಮಹಿಳೆಯರು ಸಹ ಸೇರಿದ್ದಾರೆ. ಇದಲ್ಲದೇ 35 ವರ್ಷದ ವ್ಯಕ್ತಿ ಸಜೀವ ದಹನಗೊಂಡಿದ್ದಾರೆ. ಇವರೆಲ್ಲರೂ ಒಂದೇ ಕುಟುಂಬದವರು. ಈ ನಡುವೆ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಎರಡು ಅಂತಸ್ತಿನ ಮನೆಯಲ್ಲಿ ವಾಸವಿದ್ದರು ಎಂದು ಆಯುಕ್ತರು ಹೇಳಿದ್ದಾರೆ.
ಈ ಮನೆ ಸಾರಿಕ್ ಎಂಬುವವರಿಗೆ ಸೇರಿದ್ದು, ಇವರು ಗುತ್ತಿಗೆದಾರರಾಗಿದ್ದು, ಮನೆಯಿಂದ ಹೊರಗಿದ್ದರು. ಬುಧವಾರ ರಾತ್ರಿ ಮನೆಗೆ ವಾಪಸಾಗುವಾಗ ಮನೆಗೆ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಕೆಲವು ಯಂತ್ರಗಳನ್ನು ಸಹ ಮನೆಯಲ್ಲಿ ಇರಿಸಲಾಗಿದ್ದರಿಂದ ಬೆಂಕಿಯು ಭೀಕರ ಸ್ವರೂಪವನ್ನು ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿ:ಸೈಬರ್ ಕಳ್ಳರ ಹೊಸ ತಂತ್ರ 'ಡಿಜಿಟಲ್ ಅರೆಸ್ಟ್'? ಅವಶ್ಯವಾಗಿ ತಿಳಿಯಿರಿ, ಅಪಾಯದಿಂದ ಪಾರಾಗಿ! - Digital Arrest