ಬಿಜಾಪುರ (ಛತ್ತೀಸಗಢ) : ಬಿಜಾಪುರದ ಗಂಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ಭದ್ರತಾ ಪಡೆಗಳ ಯೋಧರು ನಕ್ಸಲೀಯರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೆಲ ಪ್ರಮುಖ ನಕ್ಸಲೀಯ ನಾಯಕರನ್ನು ಸುಮಾರು 900 ಯೋಧರು ಸುತ್ತುವರೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿದ ದಾಂತೆವಾಡಾ ಡಿಐಜಿ ಕಮಲೋಚನ ಕಶ್ಯಪ್, "ಬೆಳಗ್ಗೆಯಿಂದ ನಡೆಯುತ್ತಿರುವ ಎನ್ಕೌಂಟರ್ನಲ್ಲಿ 12 ನಕ್ಸಲೀಯರು ಹತರಾಗಿದ್ದಾರೆ. ಯೋಧರು ಸಂಪೂರ್ಣ ಪ್ರದೇಶವನ್ನು ಸುತ್ತುವರೆದಿದ್ದಾರೆ. ಹಿರಿಯ ನಕ್ಸಲ್ ನಾಯಕರನ್ನು ಕೂಡ ಯೋಧರು ಸುತ್ತುವರೆದಿದ್ದಾರೆ" ಎಂದು ಹೇಳಿದ್ದಾರೆ. ಆದಾಗ್ಯೂ ನಿಖರವಾಗಿ ಎಷ್ಟು ಜನ ನಕ್ಸಲೀಯರು ಹತರಾಗಿದ್ದಾರೆ ಎಂಬುದು ಕಾರ್ಯಾಚರಣೆ ಪೂರ್ಣವಾದ ನಂತರವೇ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಬಿಜಾಪುರದ ಗಂಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಪೀಡಿಯಾ ಅರಣ್ಯದಲ್ಲಿ ಡಿಆರ್ಜಿ, ಎಸ್ಟಿಜಿ, ಕೋಬ್ರಾ ಬೆಟಾಲಿಯನ್ ಸಿಬ್ಬಂದಿ ಜಂಟಿ ತಂಡವು ಶುಕ್ರವಾರ ಮುಂಜಾನೆ ನಕ್ಸಲ್ ವಿರೋಧಿ ಕಾರ್ಯಾಚರಣೆ ಆರಂಭಿಸಿತ್ತು. ಬೆಳಗ್ಗೆ 6 ಗಂಟೆಯಿಂದ ಎನ್ ಕೌಂಟರ್ ಪ್ರಾರಂಭವಾಯಿತು. ಸೈನಿಕರು ಮತ್ತು ನಕ್ಸಲೀಯರ ಮಧ್ಯೆ ಆಗಾಗ ಗುಂಡಿನ ಚಕಮಕಿ ನಡೆಯುತ್ತಿದೆ.
ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ಎನ್ಕೌಂಟರ್ ನಡೆದಿರುವುದನ್ನು ದೃಢಪಡಿಸಿದ್ದಾರೆ. "ಪೀಡಿಯಾ ಕಾಡಿನಲ್ಲಿ ನಕ್ಸಲೀಯರು ಬೀಡು ಬಿಟ್ಟಿರುವ ಬಗ್ಗೆ ವರದಿಗಳು ಬಂದಿದ್ದವು. ಮಾಹಿತಿಯ ನಂತರ, ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಯೋಧರು ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದರು. ಸಿಆರ್ಪಿಎಫ್ ಸಿಬ್ಬಂದಿ ಡಿಆರ್ಜಿ ಮತ್ತು ಎಸ್ಟಿಎಫ್ ಜೊತೆಗೆ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಮಾಹಿತಿಯ ಪ್ರಕಾರ, ಹಾರ್ಡ್ಕೋರ್ ನಕ್ಸಲೀಯರಾದ ಲಿಂಗ ಮತ್ತು ಪಾಪರಾವ್ ಕಾಡಿನಲ್ಲಿ ಇರುವ ಮಾಹಿತಿ ಬಂದಿತ್ತು. ಹಿರಿಯ ನಕ್ಸಲ್ ನಾಯಕರು ಮಾತ್ರವಲ್ಲದೆ ಇನ್ನೂ ಅನೇಕ ಉಗ್ರ ನಕ್ಸಲೀಯರು ಕೂಡ ಅರಣ್ಯದಲ್ಲಿ ಇರುವ ಬಗ್ಗೆ ಮಾಹಿತಿ ಬಂದಿತ್ತು" ಎಂದು ಬಿಜಾಪುರ ಎಸ್ಪಿ ಜಿತೇಂದ್ರ ಯಾದವ್ ಹೇಳಿದರು.
ಏಪ್ರಿಲ್ನಲ್ಲೂ ನಡೆದಿತ್ತು ಎನ್ಕೌಂಟರ್: ಇದಕ್ಕೂ ಮುನ್ನ ಏಪ್ರಿಲ್ 30 ರಂದು ನಾರಾಯಣಪುರ ಮತ್ತು ಕಂಕೇರ್ ಗಡಿಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆದಿತ್ತು. ಸುಮಾರು 9 ಗಂಟೆಗಳ ಕಾಲ ನಡೆದ ಈ ಎನ್ಕೌಂಟರ್ನಲ್ಲಿ 10 ನಕ್ಸಲರು ಹತರಾಗಿದ್ದರು. ಹತ್ಯೆಗೀಡಾದವರ ಪೈಕಿ ಇಬ್ಬರು ನಕ್ಸಲರನ್ನು ಡಿವಿಸಿಎಂ ಜೋಗಣ್ಣ ಮತ್ತು ಡಿವಿಸಿಎಂ ವಿನಯ್ ಅಲಿಯಾಸ್ ಅಶೋಕ್ ಎಂದು ಗುರುತಿಸಲಾಗಿದೆ. ಸಿಪಿಐ ಮಾವೋವಾದಿ ಸಂಘಟನೆಯ ಪಾಲಿಟ್ ಬ್ಯೂರೋ ಸದಸ್ಯ ಸೋನು, ಡಿವಿಸಿ ಸದಸ್ಯ ಜೋಗಣ್ಣ, ವಿನಯ್ ಅಲಿಯಾಸ್ ಅಶೋಕ್ ಮತ್ತು ಉತ್ತರ ಬಸ್ತಾರ್ ವಿಭಾಗ / ಮಾಡ್ ವಿಭಾಗ / ಗಡ್ ಚಿರೋಲಿ ವಿಭಾಗದ ನಕ್ಸಲ್ ಕೇಡರ್ ಕೂಡ ಈ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟಿದ್ದರು.
ಇದನ್ನೂ ಓದಿ : ಸೇನಾ ವಾಹನಗಳ ಮೇಲೆ ದಾಳಿ : 6ನೇ ದಿನಕ್ಕೆ ಕಾಲಿಟ್ಟ ಶೋಧ ಕಾರ್ಯಾಚರಣೆ ; ಮೂವರು ಉಗ್ರರ ಛಾಯಾಚಿತ್ರ ಬಿಡುಗಡೆ - Search operation in poonch