ಕಲ್ಲಕುರಿಚಿ (ತಮಿಳುನಾಡು): ಕಲ್ಲಕುರಿಚಿ ಜಿಲ್ಲೆಯ ಕರುಣಾಪುರಂನಲ್ಲಿ ನಕಲಿ ಮದ್ಯ ಸೇವಿಸಿದ 221 ಮಂದಿಯನ್ನು ಕಲ್ಲಕುರಿಚಿ, ಸೇಲಂ, ವಿಲ್ಲುಪುರಂ, ಮತ್ತು ಪುದುಚೇರಿ ಜಿಪ್ಮರ್ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಮೆಥನಾಲ್ ಮಿಶ್ರಿತ ಮದ್ಯ ಸೇವಿಸಿದ ಪರಿಣಾಮ, ಸೋಮವಾರ (ಜೂ.24) ಮಧ್ಯಾಹ್ನದವರೆಗೆ ಕಣ್ಣು ಉರಿ, ಮೂರ್ಛೆ, ಹೊಟ್ಟೆನೋವು, ಬೇದಿ, ವಾಂತಿ ಸೇರಿ ನಾನಾ ಕಾರಣಗಳಿಂದ ಒಟ್ಟು 58 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 156 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಕಲಿ ಮದ್ಯ ದುರಂತದ ನಂತರ ತಮಿಳುನಾಡು ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಈ ಬಗ್ಗೆ ಕೂಲಂಕಶವಾಗಿ ವರದಿ ಪಡೆಯುತ್ತಿದೆ. ದುರಂತದಲ್ಲಿ ಕರುಣಾಪುರಂ, ಮಾಧವಚೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 44 ಮಹಿಳೆಯರು ತಮ್ಮ ಗಂಡಂದಿರನ್ನು ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಈ ಪೈಕಿ 40 ವರ್ಷದೊಳಗಿನ 20 ಮಹಿಳೆಯರು ಮತ್ತು 40 ವರ್ಷ ಮೇಲ್ಪಟ್ಟ 24 ಮಹಿಳೆಯರಿದ್ದಾರೆ. ಈ ದುರಂತದಲ್ಲಿ ಒಟ್ಟು 44 ಮಹಿಳೆಯರು ತಮ್ಮ ಸಂಗಾತಿಯನ್ನು ಕಳೆದುಕೊಂಡಿದ್ದು, ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ, ಪತಿಯನ್ನು ಕಳೆದುಕೊಂಡ 12 ಮಂದಿಗೆ ವಿವಿಧ ವೃತ್ತಿಯ ತರಬೇತಿ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಲ್ಲಕುರಿಚಿಯ ಕರುಣಾಪುರಂನಲ್ಲಿ 11 ತಿಂಗಳ ಮಗುವಿನ ತಾಯಿ ಕೂಡ ತನ್ನ ಪತಿಯನ್ನು ಕಳೆದುಕೊಂಡಿದ್ದು, ದುಃಖದ ವಾತಾವರಣ ನಿರ್ಮಾಣ ಆಗಿದೆ. ಇನ್ನು, ದುರ್ಘಟನೆಯಲ್ಲಿ ಸಾವನ್ನಪ್ಪಿದ ರಮಣ್ ಎಂಬುವರ 2ನೇ ಪತ್ನಿ ಸದ್ಯ 2 ತಿಂಗಳ ಗರ್ಭಿಣಿ. ಜತೆಗೆ, 6 ವರ್ಷದ ಮಗಳಿದ್ದಾಳೆ.