ಹೈದರಾಬಾದ್:ಮೂತ್ರಪಿಂಡ ನೋವಿನಿಂದ ಆಸ್ಪತ್ರೆಗೆ ದಾಖಲಾದ ರೋಗಿಯ ಕಿಡ್ನಿಯಲ್ಲಿ ಭಾರೀ ಸಂಖ್ಯೆಯ ಕಲ್ಲುಗಳು ಕಂಡುಬಂದಿವೆ. 2 ಗಂಟೆಗಳ ಕಾಲ ವೈದ್ಯರು ಚಿಕಿತ್ಸೆ ನಡೆಸಿ ತೆಗೆದಿದ್ದು ಬರೋಬ್ಬರಿ 418 ಕಲ್ಲುಗಳನ್ನು. ಇದನ್ನು ಕಂಡು ವೈದ್ಯರೇ ದಂಗಾಗಿದ್ದಾರೆ. ಸದ್ಯ ವ್ಯಕ್ತಿ ಈಗ ಸುಧಾರಿಸಿಕೊಂಡಿದ್ದಾರೆ.
ಇಲ್ಲಿನ ಸೋಮಾಜಿಗುಡಾದ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಅಂಡ್ ಯುರಾಲಜಿ (ಎಐಎನ್‌ಯು) ಆಸ್ಪತ್ರೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. 60 ವರ್ಷದ ವ್ಯಕ್ತಿಯೊಬ್ಬರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆತನನ್ನು ವೈದ್ಯರು ತಪಾಸಣೆ ನಡೆಸಿದರು. ಈ ವೇಳೆ ಕಿಡ್ನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲ್ಲುಗಳು ಇರುವುದು ಕಂಡು ಬಂದಿದೆ.
ವೈದ್ಯರಾದ ಡಾ. ಕೆ.ಪೂರ್ಣಚಂದ್ರರೆಡ್ಡಿ, ಡಾ.ಗೋಪಾಲ್, ಮತ್ತು ಡಾ.ದಿನೇಶ್ ಅವರ ತಂಡ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆ. ಪರ್ಕ್ಯುಟೇನಿಯಸ್ ನೆಫ್ರೊಲಿಥೊಟೊಮಿ (PCNL) ವಿಧಾನದ ಮೂಲಕ ಚಿಕಿತ್ಸೆ ನಡೆಸಿದ್ದಾರೆ. ಹಿರಿಯ ವ್ಯಕ್ತಿಯ ಮೂತ್ರಪಿಂಡದಲ್ಲಿ ಬರೋಬ್ಬರಿ 418 ವಿವಿಧ ಪ್ರಮಾಣದ ಕಲ್ಲುಗಳನ್ನು ಹೊರತೆಗೆಯಲಾಗಿದೆ. ಸದ್ಯ ಮೂತ್ರಪಿಂಡದ ಕಾರ್ಯವು ಸುಧಾರಿಸಿದ್ದರಿಂದ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.